ಈ ಸಾಲಿನಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ
ಶಬರಿಮಲೆ: ಈ ಸಾಲಿನ ಶಬರಿಮಲೆ ಮಂಡಲ ಮತ್ತು ಮಕರ ವಿಳಕ್ಕು ವಾರ್ಷಿಕ ಯಾತ್ರಾ ಋತುವಿಗೆ ಜ.20ರಂದು ತೆರೆಬೀಳಲಿದೆ. ಭಕ್ತರಿಗೆ ಜ.19ರಂದು ರಾತ್ರಿ ತನಕ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿದ್ದು, ಜ.20ರಂದು ಬೆಳಗ್ಗೆ ರಾಜ ಪ್ರತಿನಿಧಿಯ ದರ್ಶನದ ಬಳಿಕ ದೇಗುಲದ ಗರ್ಭಗುಡಿಯ ಮುಚ್ಚಲಾಗುತ್ತದೆ. ಬಳಿಕ ರಾಜ ಪ್ರತಿನಿಧಿ ತಿರುವಾಭರಣದೊಂದಿಗೆ ಮರಳುವುದರೊಂದಿಗೆ ಎರಡೂವರೆ ತಿಂಗಳ ಮಹೋತ್ಸವ ಸಂಪನ್ನಗೊಳ್ಳಲಿದೆ.
ಈ ಬಾರಿ ಮಂಡಲ-ಮಕರಜ್ಯೋತಿ ಋುತುವಿನಲ್ಲಿ 52 ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಶಬರಿಮಲೆಯ ಇತಿಹಾಸದಲ್ಲಿ ಈ ಬಾರಿ ಅತಿಹೆಚ್ಚು 435 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 20 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನಪ್ರಸಾದ ಒದಗಿಸಲಾಗಿದೆ.
ಮಕರಜ್ಯೋತಿ ಮಹೋತ್ಸವ ಪ್ರಯುಕ್ತ ಮಾಳಿಗಪ್ಪುರಂ ಮಣಿ ಮಂಟಪದಲ್ಲಿ ಮಕರ ಸಂಕ್ರಮಣದಂದು ಆರಂಭವಾದ ಐದು ದಿನಗಳ ರಂಗೋಲಿ ರಚನೆ ಜ.18ರಂದು ಸಂಪನ್ನಗೊಳ್ಳಲಿದೆ. ಬುಧವಾರ ಬಾಲಮಣಿಕಂಠ, ಗುರುವಾರ ವಿಲ್ಲಾಳಿವೀರ, ಶುಕ್ರವಾರ ರಾಜಕುಮಾರ, ಶನಿವಾರ ಹುಲಿ ವಾಹನ ಅಯ್ಯಪ್ಪನ ಚಿತ್ರ ಬಿಡಿಸಲಾಗಿದೆ. ಭಾನುವಾರ ತಿರುವಾಭರಣ ಭೂಷಿತ ಧರ್ಮಶಾಸ್ತಾರನ ರಂಗೋಲಿ ಬಿಡಿಸಲಾಗುತ್ತದೆ.
ರಂಗವಲ್ಲಿ ರಚನೆ ಬಳಿಕ ಸನ್ನಿಧಾನಕ್ಕೆ ಮೆರವಣಿಗೆ, 18 ಮೆಟ್ಟಿಲು ಕೆಳಗಿನ ಪ್ರಾಂಗಣದಲ್ಲಿ ದಕ್ಷಿಣಾಭಿಮುಖವಾಗಿ ನಿಂತು ನಾಯಾಟ್ಟುವಿಳಿ ನಡೆಯುತ್ತದೆ. ಜ.18ರಂದು ರಂಗೋಲಿ ರಚನೆ ಬಳಿಕ ಶರಂಗುತ್ತಿಗೆ ಮೆರವಣಿಗೆ ಹಾಗೂ ಅಲ್ಲಿನಾಯಾಟ್ಟುವಿಳಿ ಆಚರಣೆ ನಡೆಯಲಿದೆ. ಜ.19ರಂದು ಮಾಳಿಗಪ್ಪುರಂನಲ್ಲಿ ಗುರುತಿ ಪೂಜೆ ನಡೆಯಲಿದೆ.
ಮಕರಜ್ಯೋತಿ ಮಹೋತ್ಸವದ ವೇಳೆ ಕಾಡಿನೊಳಗೆ ಹೋಗುವ ತನ್ನ ಕಾವಲುಗಾರರಾದ ಮಲೆ ದೇವತೆ ಮತ್ತು ಭೂತ ಗಣಗಳನ್ನು ಅಯ್ಯಪ್ಪ ಸನ್ನಿಧಾನಕ್ಕೆ ಕರೆತರುವ ಪರಿಕಲ್ಪನೆಯಲ್ಲಿ ಶರಂಗುತ್ತಿಯಿಂದ ದೀವಟಿಕೆ ವಾದ್ಯ ಮೇಳಗಳಿಲ್ಲದೆ ಮೌನವಾಗಿ ಮೆರವಣಿಗೆ ಮೂಲಕ ಬಂದು ಮಣಿಮಂಟಪದಲ್ಲಿ ರಚಿಸಲಾದ ರಂಗೋಲಿಯನ್ನು ಅಳಿಸಲಾಗುತ್ತದೆ.
























