ಮೊದಲ ಸಲ ಪರ್ಯಾಯ ಪೀಠವೇರಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು
ಉಡುಪಿ: ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಸರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಉಡುಪಿ ಜನತೆಯ ಸಹಕಾರದೊಂದಿಗೆ ಶ್ರದ್ಧಾ–ಭಕ್ತಿಯಿಂದ, ಅತ್ಯಂತ ವ್ಯವಸ್ಥಿತ ಹಾಗೂ ವೈಭವಯುತವಾಗಿ ಪರ್ಯಾಯ ಮಹೋತ್ಸವವನ್ನು ನಡೆಸಲು ಪೊಡವಿಗೊಡೆಯ ಶ್ರೀಕೃಷ್ಣನ ನಗರಿ ಉಡುಪಿ ಸಜ್ಜಾಗಿದೆ.
ಪರ್ಯಾಯ ಮಹೋತ್ಸವದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಜನವರಿ 17ರ ರಾತ್ರಿ ಸಹ ಸಾರ್ವಜನಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಇಡೀ ನಗರವನ್ನು ಪರ್ಯಾಯ ಮಹೋತ್ಸವಕ್ಕಾಗಿ ಅಲಂಕರಿಸಲಾಗಿದೆ. ದೂರದೂರುಗಳಿಂದ ಈಗಾಗಲೇ ಜನರು ಬರಲಾರಂಭಿಸಿದ್ದಾರೆ.

ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಐದು ಸಾಧಕ ಗಣ್ಯರಿಗೆ ಶಿರೂರು ಶ್ರೀಪಾದರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.
ಶಿರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ತಮ್ಮ ಚತುರ್ಥ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಜನವರಿ 17ರಂದು ಸಂಜೆ 4.30ಕ್ಕೆ ರಥಬೀದಿಯ ಪೂರ್ಣಪ್ರಜ್ಞ ವೇದಿಕೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಜನವರಿ 18ರ ಕಾರ್ಯಕ್ರಮಗಳು
ಪ್ರಾತಃ 1.15: ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ
ಪ್ರಾತಃ 2.00: ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಆರಂಭ
ಬೆಳಗ್ಗೆ 5.15: ಕನಕನ ಕಿಂಡಿ ಮೂಲಕ ಶ್ರೀಕೃಷ್ಣ, ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದರ್ಶನ
ಬೆಳಗ್ಗೆ 5.45: ಶ್ರೀ ಸರ್ವಜ್ಞಪೀಠಾರೋಹಣ
ಬೆಳಗ್ಗೆ 5.55: ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್
ಬೆಳಗ್ಗೆ 6.15: ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್, ಅನುಗ್ರಹ ಸಂದೇಶ
ಬೆಳಗ್ಗೆ 10.30: ಶ್ರೀಕೃಷ್ಣ ದೇವರ ಮಹಾಪೂಜೆ ಹಾಗೂ ಪಲ್ಲಪೂಜೆ
ಅನ್ನ ಸಂತರ್ಪಣೆ ವ್ಯವಸ್ಥೆ
ಜನವರಿ 17ರ ರಾತ್ರಿ 7.30ರಿಂದ ಸುಮಾರು 40 ಸಾವಿರ ಮಂದಿಗೆ ವಿಶೇಷ ಅನ್ನ ಸಂತರ್ಪಣೆ ನಡೆಯಲಿದೆ. ಸ್ಥಳ: ಶ್ರೀ ನಿತ್ಯಾನಂದ ಸ್ವಾಮಿ ಮಂದಿರ–ನಗರಸಭಾ ಕಚೇರಿ ಬಳಿ ಹಾಗೂ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ.
ಜನವರಿ 18ರಂದು ಪೂರ್ವಾಹ್ನ 11.30ರಿಂದ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ 50 ಸಾವಿರ ಮಂದಿಗೆ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ವೈಭವದ ಪರ್ಯಾಯ ಮೆರವಣಿಗೆ
ಜನವರಿ 18ರ ಮುಂಜಾನೆ 2 ಗಂಟೆಯಿಂದ ಉಡುಪಿ ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ 85ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು ಹಾಗೂ ಆಕರ್ಷಕ ಸ್ತಬ್ಧಚಿತ್ರಗಳೊಂದಿಗೆ ವೈಭವದ ಪರ್ಯಾಯ ಮೆರವಣಿಗೆ ಸಾಗಲಿದೆ.
ದರ್ಬಾರ್ ಸಭೆ – ಗಣ್ಯರ ಉಪಸ್ಥಿತಿ
ಜನವರಿ 18ರ ಬೆಳಗ್ಗೆ 6 ಗಂಟೆಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಭೆ ನಡೆಯಲಿದ್ದು, ಅಷ್ಟ ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಉದ್ಯಮಿಗಳು, ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು
ಜನವರಿ 18ರಿಂದ 27ರವರೆಗೆ ಪ್ರತಿದಿನ ಸಂಜೆ ರಾಜಾಂಗಣದಲ್ಲಿ ಧಾರ್ಮಿಕ ಪ್ರವಚನಗಳೊಂದಿಗೆ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ನಾದಸ್ವರ, ಸಂಗೀತ, ಭಕ್ತಿ ಸಂಗೀತ, ನೃತ್ಯ, ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶಿರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಉಡುಪಿ ನಗರ ಸಂಪೂರ್ಣವಾಗಿ ಸಜ್ಜುಗೊಂಡಿದ್ದು, ಭಕ್ತರ ಸ್ವಾಗತಕ್ಕೆ ಶ್ರೀಕೃಷ್ಣ ನಗರಿ ಸಿದ್ಧವಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ತಿಳಿಸಿದೆ.
























