ಪಣಜಿ: ಗೋವಾದಲ್ಲಿ ರಷ್ಯಾದ ವ್ಯಕ್ತಿಯೊಬ್ಬ ತನ್ನದೇ ದೇಶದ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಬರ್ಬರವಾಗಿ ಕೊಂದಿರುವ ಘಟನೆ ಸಂಭವಿಸಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಗೋವಾದ ಅರಾಂಬೋಲ್ ಮತ್ತು ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀವಾ (37) ಮತ್ತು ಎಲೆನಾ ಕಸ್ತನೋವಾ (37) ಅವರನ್ನು ಅಲೆಕ್ಸಿ ಲಿಯೊನೊವ್ ಎಂಬಾತ ಕೊಲೆಗೈದಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 14 ರಂದು ಆರೋಪಿ ಮೊರ್ಜಿಮ್ನಲ್ಲಿ ವಾಸವಾಗಿದ್ದ ಸ್ನೇಹಿತೆ ಎಲೆನಾ ವನೀವಾ ಅವರ ಕುತ್ತಿಗೆಯನ್ನು ಸೀಳಿ ಕೊಂದಿದ್ದಾನೆ. ಜನವರಿ 15ರಂದು ಸಂಜೆ ಎಂಟು ಕಿಲೋಮೀಟರ್ ದೂರದಲ್ಲಿರುವ ಅರಂಬೋಲ್ ಗ್ರಾಮಕ್ಕೆ ತನ್ನ ಸ್ನೇಹಿತೆ ಎಲೆನಾ ಕಸ್ತನೋವಾ ಅವರನ್ನು ಭೇಟಿಯಾಗಲು ಹೋಗಿದ್ದ. ಬಳಿಕ ಆಕೆಯನ್ನು ಹಗ್ಗದಿಂದ ಕಟ್ಟಿ ಆಕೆಯ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರಿಗೂ ಮೊದಲೇ ಪರಿಚಯ ಇತ್ತು ಎನ್ನಲಾಗಿದೆ. ಆದರೆ ಕೊಲೆಯ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡೂ ಶವಗಳು ಶುಕ್ರವಾರ (ಜ.16) ಪತ್ತೆಯಾಗಿವೆ. ವನೀವಾ ವಾಸವಾಗಿದ್ದ ಮನೆ ಮಾಲೀಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಲಿಯೊನೊವ್ನನ್ನು ಪೊಲೀಸರು ಬಂಧಿಸಿದ್ದು, ಜೋಡಿ ಕೊಲೆಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
























