ಕೋಮುವಾದಿ ಮನಸ್ಥಿತಿಯಿಂದಾಗಿ ಬಾಲಿವುಡ್ನಲ್ಲಿ ಅವಕಾಶ ಸಿಗುತ್ತಿಲ್ಲ ಎಂದ ಸಂಗೀತ ನಿರ್ದೇಶಕ
ಮುಂಬೈ: ಆಸ್ಕರ್ ಅವಾರ್ಡ್ ಗೆದ್ದಿರುವ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಒಂದು ಹೇಳಿಕೆ ಬಾಲಿವುಡ್ನಲ್ಲಿ ವಿವಾದದ ಅಲೆ ಎಬ್ಬಿಸಿದೆ. ಬಾಲಿವುಡ್ನಲ್ಲಿ ನನಗೆ 8 ವರ್ಷಗಳಿಂದ ಅವಕಾಶ ಸಿಗ್ತಿಲ್ಲ. ಕೋಮುವಾದಿ ಮನಸ್ಥಿತಿಯೂ ಇದಕ್ಕೆ ಕಾರಣವಿರಬಹುದು ಎಂದು ರೆಹಮಾನ್ ಹೇಳಿದ್ದಾರೆ.
ಬಿಬಿಸಿ ಏಷ್ಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತಾಡಿರುವ ರೆಹಮಾನ್, ನಾನು ಕೆಲಸ ಹುಡುಕಿ ಹೋಗಲ್ಲ. ನನ್ನನ್ನ ಅರಸಿ ಬರುವ ಕೆಲಸವನ್ನು ಅತ್ಯಂತ ಶ್ರದ್ಧೆ, ಪ್ರಾಮಾಣಿಕವಾಗಿ ಮಾಡ್ತೇನೆ. 90ರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಈ ರೀತಿಯ ಯಾವುದೇ ಪೂರ್ವಾಗ್ರಹ ಮತ್ತು ಪಕ್ಷಪಾತ ಇರಲಿಲ್ಲ. ಈಗ ನನ್ನ ಕಿವಿಗೆ ಬಿದ್ದಿದೆ. ಮ್ಯೂಸಿಕ್ ಕಂಪನಿಯೊಂದು ನಿಮ್ಮನ್ನು ಬದಿಗೊತ್ತಿ ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿದೆ ಅಂದಿದ್ದಾರೆ.
ಹೌದಾ.. ಗ್ರೇಟ್.. ಹಾಗಾದರೆ ನಾನು ನನ್ನ ಕುಟುಂಬದ ಜೊತೆ ಸಮಯ ಕಳೆಯಬಹುದು ಅಂದಿದ್ದೆ. ಆದರೆ ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಗಿದ್ದು, ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಇದು ಮತೀಯವಾದವೂ ಇರಬಹುದು ಅಂದಿದ್ದಾರೆ. ರೋಜಾ, ಬಾಂಬೆ, ದಿಲ್ಸೇ, ತಾಲ್ ಚಿತ್ರಗಳಂಥ ಎವರ್ಗ್ರೀನ್ ಹಾಡು ಕೊಟ್ಟಿದ್ದರೂ ಈಗಲೂ ಅಲ್ಲಿ ನಾನು ಹೊರಗಿನವನಾಗಿದ್ದೇನೆ. ಸಂಗೀತ ದಂತಕಥೆ ಇಳಯರಾಜಾ ಅವರ ಸ್ಥಿತಿಯೂ ಹಾಗೇ ಆಗಿದೆ ಅಂದಿದ್ದಾರೆ.
ನೀವು ಮುಸ್ಲಿಂ ಹೆಸರು ಹೊಂದಿದ್ದೀರಿ. ರಾಮಾಯಣ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದರೆ ವಿರೋಧ ಬರೋದಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿರುವ ರೆಹಮಾನ್, ವಿರೋಧ ಬರುತ್ತೆ ಅಂತ ಖಂಡಿತಾ ಹೇಳಲ್ಲ. ಏಕೆಂದರೆ, ನಾನು ಬ್ರಾಹ್ಮಣರ ಶಾಲೆಗಳಲ್ಲೂ ಓದಿದ್ದೇನೆ. ಆ ಶಾಲೆಗಳಲ್ಲಿ ರಾಮಾಯಣ, ಮಹಾಭಾರತಗಳನ್ನ ಬೋಧಿಸುತ್ತಿದ್ದರು. ನನಗೆ ತುಂಬಾ ಚೆನ್ನಾಗಿ ಆ ಕಥೆಗಳು ಗೊತ್ತು. ಇವು ಒಳ್ಳೆ ವ್ಯಕ್ತಿಗಳು, ಮೌಲ್ಯಗಳು, ಸಿದ್ಧಾಂತಗಳನ್ನು ಒಳಗೊಂಡಿವೆ. ಜನ ಈ ಬಗ್ಗೆ ಚರ್ಚೆ ಮಾಡಬಹುದು. ಆದರೆ, ನಾನು ಎಲ್ಲ ಒಳ್ಳೇತನಗಳನ್ನು ಗೌರವಿಸುತ್ತೇನೆ. ಒಳ್ಳೇತನ… ಒಳ್ಳೇ ವಿಷಯಗಳನ್ನು ಎಲ್ಲ ಕಡೆಯಿಂದಲೂ ಕಲಿಯಬೇಕು ಅಂದಿದ್ದಾರೆ.
























