ಮಡಿಕೇರಿ: ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಗರ್ಭವತಿಯನ್ನಾಗಿಸಿ ಮಗು ನೀಡಿದ ಆರೋಪದಲ್ಲಿ ಖಾಸಗಿ ಬಸ್ಸಿನ ಕ್ಲೀನರ್ಗೆ ಪೋಕ್ಸೋ ಕಾಯಿದೆಯಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ವಿರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಆರೋಪಿಯನ್ನು ಎಚ್. ಆರ್. ಮನೋಜ್ (26) ಎಂದು ಗುರುತಿಸಲಾಗಿದೆ.
ಮನೋಜ್ಗೆ ಈಗಾಗಲೇ ಮದುವೆಯೂ ಆಗಿದೆ. ಈತ ತಾನು ಕೆಲಸ ಮಾಡುತ್ತಿದ್ದ ಬಸ್ಸಿನಲ್ಲಿ ಬರುತ್ತಿದ್ದ 8 ನೇ ತರಗತಿಯ ಹುಡುಗಿಯ ಜೊತೆ ಸಲುಗೆ ಬೆಳೆಸಿ, ಅವಳ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಮಾಡಿದ್ದ. ಎರಡು ಮೂರು ಬಾರಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದ ಆತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಎಂದು ತಿಳಿದು ಬಂದಿದೆ.
ಆತನಿಂದಾಗಿ ಅಪ್ರಾಪ್ತ ಬಾಲಕಿ ಬಸಿರಾಗಿದ್ದು, 2019 ರ ಡಿ. 21 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಆರೋಪಿ ಮನೋಜ್ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಫೆ. 12, 2020 ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿರುವ ನ್ಯಾಯಾಲಯ ಆರೋಪಿಗೆ 20 ವರ್ಷದ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದೆ. ದಂಡ ನೀಡಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸುವಂತೆ ತೀರ್ಪು ನೀಡಿದೆ.
























