ಕುಂಬಳೆ ಆರಿಕ್ಕಾಡಿ ಟೊಲ್‌ಗೇಟ್‌ ಧ್ವಂಸಗೈದ ಪ್ರತಿಭಟನೆಕಾರರು

ರಾತ್ರಿ ನಡೆದ ಪ್ರತಿಭಟನೆಯಲ್ಲಿ ಟೋಲ್‌ಗೇಟ್‌ನ ಕ್ಯಾಮರಾ, ಗೇಟ್‌, ಕಚೇರಿ ಧ್ವಂಸ

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್‌ ವಿರುದ್ಧ ನಡೆಯುತ್ತಿರುವ ಹೋರಾಟ ಹಿಂಸೆಗೆ ತಿರುಗಿದ್ದು, ಪ್ರತಿಭಟನಾಕಾರರು ಬುಧವಾರ ರಾತ್ರಿ ಟೋಲ್‌ಗೇಟ್ ಕ್ಯಾಮರಾ ಹಾಗೂ ಗಾಜುಗಳನ್ನು ಪುಡಿಗೈದಿದ್ದಾರೆ. ಹೋರಾಟಕ್ಕೆ ಬೆಂಬಲವಾಗಿ ಕುಂಬಳೆ ಪೇಟೆಯಿಂದ ಬಂದ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಟೋಲ್‌ಗೇಟ್‌ನ ಕ್ಯಾಮರಾಗಳನ್ನು ಧ್ವಂಸಗೊಳಿಸಿದ್ದು, ಕಚೇರಿ ಗಾಜುಗಳನ್ನು ಹಾನಿಗೊಳಿಸಿದ್ದಾರೆ. ವಾಹನಗಳನ್ನು ತಡೆಯುವ ಹ್ಯಾಂಡಲ್‌ಗಳನ್ನು ಕಿತ್ತೆಸೆದಿದ್ದಾರೆ. ಸ್ಕ್ಯಾನರ್‌ಗಳಿಗೆ ಕಪ್ಪು ಸ್ಟಿಕ್ಕರ್ ಅಂಟಿಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ತಡೆಯಲು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿವಿಧ ಯುವಜನ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಕಚೇರಿಯೊಳಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ತಡೆದರು. ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಸೋಮವಾರದಿಂದ ಟೋಲ್‌ಗೇಟ್‌ಗೆ ಪೊಲೀಸರು ಭದ್ರತೆ ಕಲ್ಪಿಸಿದ್ದು, ಈ ನಡುವೆ ಬುಧವಾರ ರಾತ್ರಿ ನಡೆದ ಪ್ರತಿಭಟನಾ ಜಾಥಾದಲ್ಲಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡರು. ಇದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವಂತಾಯಿತು. ಪ್ರತಿಭಟನೆ ಬಳಿಕ ವಾಹನಗಳು ಟೋಲ್ ಶುಲ್ಕ ಇಲ್ಲದೆ ಸಂಚಾರ ನಡೆಸುತ್ತಿವೆ.





















































 
 

ಟೋಲ್ ಶುಲ್ಕ ವಿರುದ್ಧ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಇಂಪಾ ಶೇಖರ್ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ವಿಫಲಗೊಂಡಿತ್ತು. ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಆದರೆ ಪ್ರಕರಣ ಹೈಕೋರ್ಟ್ ವಿಚಾರಣೆಯಲ್ಲಿರುವುದರಿಂದ ಅಂತಿಮ ತೀರ್ಮಾನ ಹೊರಬೀಳುವ ತನಕ ಟೋಲ್ ಶುಲ್ಕ ವಸೂಲಿ ಸ್ಥಗಿತಗೊಳಿವಂತೆ ಶಾಸಕ ಅಶ್ರಫ್ ಒತ್ತಾಯಿಸಿದ್ದರು.

ಸೋಮವಾರ ಬೆಳಗ್ಗೆಯಿಂದ ಟೋಲ್ ಶುಲ್ಕ ವಸೂಲು ವಿರುದ್ಧ ಹೋರಾಟ ನಡೆಯುತ್ತಿದ್ದು, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಮೆರವಣಿಗೆ ನಡೆಸಿವೆ. ಈ ನಡುವೆ ಬುಧವಾರ ರಾತ್ರಿ ಯುವಜನ ಪಕ್ಷಗಳು ನಡೆಸಿದ ಪ್ರತಿಭಟನಾ ಜಾಥಾ ತೀವ್ರ ಸ್ವರೂಪ ಪಡೆದುಕೊಂಡಿದೆ. ಶುಲ್ಕ ವಸೂಲು ರದ್ದುಗೊಳಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.

error: Content is protected !!
Scroll to Top