ಹೆರಿಗೆ ಸಮಯ ಮಗು ಮೃತ್ಯು: ಸಂದೇಹ ವ್ಯಕ್ತಪಡಿಸಿ ಪೊಲೀಸರಿಗೆ ದೂರು

ಪುತ್ತೂರು: ಹೆರಿಗೆ ಸಮಯದಲ್ಲಿ ಶಿಶು ಮೃತಪಟ್ಚ ಘಟನೆಯೊಂದು ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದ್ದು, ಈ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮಗುವಿನ ತಂದೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರುದಾರರ ಸಂದೇಹದ ಮೇರೆಗೆ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ದೇರಳಕಟ್ಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೆಳ್ಳಾರೆಯ ಮಿಲನ್ ಎಂಬವರ ಪತ್ನಿ ಚೈತ್ರ ಅವರು ಮೊದಲನೇ ಬಾರಿ ಗರ್ಭಿಣಿಯಾಗಿದ್ದು ಸಿಟಿ ಆಸ್ಪತ್ರೆಯ ಡಾ. ಶೃತಿ ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ. 15 ರಂದು ಚೈತ್ರ ಅವರಿಗೆ ಹೆರಿಗೆ ದಿನಾಂಕ ಇದ್ದು, ಜ. 13 ರಂದು ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಡಾಕ್ಟರ್ ಚೈತ್ರ ಅವರಿಗೆ ಹೆರಿಗೆ ನೋವು ಬರುವ ಚುಚ್ಚುಮದ್ದು ನೀಡಿದ್ದು, ನೋವು ಬಂದ ಸಂದರ್ಭದಲ್ಲಿ ಹೆರಿಗೆಗಾಗಿ ‌ಲೇಬರ್ ರೂಮ್‌ಗೆ ಕರೆದುಕೊಂಡು ಹೋಗಲಾಗಿತ್ತು.

ಆ ಬಳಿಕ ಸಂಜೆ ಸುಮಾರಿಗೆ ವೈದ್ಯರು ಮಿಲನ್ ಅವರನ್ನು ಕರೆದು ನಿಮ್ಮ ಪತ್ನಿಗೆ ನಾವು ನಾರ್ಮಲ್ ಹೆರಿಗೆಗಾಗಿ ಪ್ರಯತ್ನಿಸಿದ್ದು, ಸಾಧ್ಯವಾಗದೇ ಹೋದಾಗ ಸಿಸೇರಿಯನ್ ಮಾಡಿ ಮಗುವನ್ನು ಹೊರ ತೆಗೆದಿದ್ದೇವೆ. ಆದರೆ ಮಗು ಹೊರ ತೆಗೆಯುವಾಗಲೇ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.





















































 
 

ಆದರೆ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮಿಲನ್ ಪೊಲೀಸರಿಗೆ ದೂರು ನೀಡಿರುವುದಾಗಿದೆ. ಮಗುವಿನ ಮರಣೋತ್ತರ ಪರೀಕ್ಷಾ ವರದಿ ಬರಬೇಕಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದ ಹಾಗೆ ಆಸ್ಪತ್ರೆ ಸ್ಪಷ್ಟನೆ ‌ನೀಡಿದ್ದು, ನಾರ್ಮಲ್ ಹೆರಿಗೆಗೆ ಪ್ರಯತ್ನ ನಡೆಸಲಾಗಿದೆ. ಆಗ ಗರ್ಭದಿಂದ ಬಂದ ನೀರಿನ ಜೊತೆಗೆ ಕರುಳ ಬಳ್ಳಿಯೂ ಹೊರಬಂದಿದೆ. ಇದು ಎಮರ್ಜೆನ್ಸಿ ಸಮಯವಾಗಿದ್ದು ಪೇಷಂಟ್‌ ಅನ್ನು ಬೇರೆ ಕಡೆಗೆ ಕಳುಹಿಸುವ ಸಮಯ ಇರಲಿಲ್ಲ. ಹಾಗಾಗಿ ಸಿಸೇರಿಯನ್ ಮಾಡಲಾಯಿತು. ಈ ವೇಳೆ ಅರಿವಳಿಕೆ ತಜ್ಞರು, ಮಕ್ಕಳ ತಜ್ಞರು ಸಹ ಜೊತೆಗೆಯೇ ಇದ್ದರು. ಮಗುವನ್ನು ಹೊರ ತೆಗೆದ ತಕ್ಷಣ ಅವರ ಕೈಗೆ ನೀಡಲಾಗಿದ್ದು, ಅದನ್ನು ಉಳಿಸಲು ಸಾಕಷ್ಟು ಪ್ರಯತ್ನ ನಡೆಸಲಾಗಿದೆ.

ಘಟನೆಗೆ ಸಂಬಂಧಿಸಿದ ಹಾಗೆ ಗರ್ಭಿಣಿಯ ಕಡೆಯವರು ನಮಗೆ ಬೈದಿದ್ದಾರೆ. ಸಾಧ್ಯವಾಗದಿದ್ದರೆ ಬೇರೆ ಕಡೆ ಕಳಿಸಬೇಕಿತ್ತು ಎನ್ನುವ ವಾದ ಅವರದ್ದು. ಆದರೆ ತುರ್ತು ಸಿಸೇರಿಯನ್ ಆಗಬೇಕಾದಾಗ ಮಂಗಳೂರಿಗೆ ತೆರಳಿ ಎಂದು ಹೇಳುವ ಸಮಯ ಅದಾಗಿರಲಿಲ್ಲ. ಹಾಗೆ ಮಾಡಿದರೆ ತಪ್ಪಾಗುತ್ತದೆ. ಇಂತಹ ಸಮಯದಲ್ಲಿ ಎಷ್ಟು ಬೇಗ ಸಿಸೇರಿಯನ್ ಆಗುತ್ತದೋ, ಆಗ ಮಗು ಉಳಿಯುವ ಸಾಧ್ಯತೆ ಇರುತ್ತದೆ. ನಾವು ಆ ಪ್ರಯತ್ನ ನಡೆಸಿದ್ದೇವೆ.

ಸಾಮಾನ್ಯವಾಗಿ ಮಗುವಿನ ತಲೆ ಮೊದಲು ಹೊರ ಬಂದು, ನಂತರ ದೇಹದ ಜೊತೆ ಕರುಳ ಬಳ್ಳಿ ಬರುತ್ತದೆ. ಆದರೆ ಈ ಪ್ರಕರಣದಲ್ಲಿ ಗರ್ಭದಿಂದ ನೀರು ಹೊರ ಬರುವಾಗಲೇ ಕರುಳು ಬಳ್ಳಿ ಹೊರ ಬಂದಿದೆ. ಇದು ಅಪರೂಪದ ಸಂಗತಿ ಅಲ್ಲ. ಆ ಸಮಯದಲ್ಲಿ ಆದಷ್ಟು ಬೇಗ ಸಿಸೇರಿಯನ್ ಮಾಡಬೇಕು. ಸಮಯ ವ್ಯರ್ಥ ಮಾಡದೆ ನಾವು ಮಗುವನ್ನು ಉಳಿಸುವ ಸಕಲ ಪ್ರಯತ್ನ ನಡೆಸಿದ್ದೇವೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ ಎಸ್. ತಿಳಿಸಿರುವುದಾಗಿದೆ

error: Content is protected !!
Scroll to Top