ಇಂದು ಪವಿತ್ರ ಮಕರ ಜ್ಯೋತಿ ದರ್ಶನ : ಶಬರಿಮಲೆಯಲ್ಲಿ ಸೇರಿದ್ದಾರೆ ಲಕ್ಷಾಂತರ ಅಯ್ಯಪ್ಪ ಭಕ್ತರು

ಈ ಸಲ ದಾಖಲೆ ಸಂಖ್ಯೆಯ ಭಕ್ತರಿಂದ ಶಬರಿಮಲೆ ಯಾತ್ರೆ ; ಕಾಣಿಕೆ ಸಂಗ್ರಹ ಏರಿಕೆ

ಶಬರಿಮಲೆ : ಮಕರ ಸಂಕ್ರಾಂತಿಯ ಪವಿತ್ರ ದಿನವಾದ ಇಂದು ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಮಕರ ಜ್ಯೋತಿ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ಕಾಯುತ್ತಿದ್ದಾರೆ. ಮಕರ ಜ್ಯೋತಿ ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸಾಗರೋಪಾದಿಯಲ್ಲಿ ಇನ್ನೂ ಆಗಮಿಸುತ್ತಲೇ ಇದ್ದಾರೆ. ಮಕರ ಜ್ಯೋತಿ ದರ್ಶನವಾಗುವುದರೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾಗುತ್ತಾರೆ. ಶಬರಿಮಲೆ ಯಾತ್ರೆ ಇನ್ನೂ ಕೆಲವು ದಿನ ನಡೆಯುವುದಾದರೂ ಹೆಚ್ಚಿನವರು ಮಕರ ಜ್ಯೋತಿ ದರ್ಶನವಾದ ಬಳಿಕ ಕಠಿಣ ವ್ರತವನ್ನು ಕೊನೆಗೊಳಿಸುತ್ತಾರೆ.

ದೇಶದ ಮೂಲೆ ಮೂಲೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಗೆ ಬಂದು ಸೇರುತ್ತಾರೆ. ಅಯ್ಯಪ್ಪನೇ ಜ್ಯೋತಿ ರೂಪದಲ್ಲಿ ಬಂದು ದರ್ಶನ ನೀಡುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ಶಬರಿಮಲೆ ಯಾತ್ರೆಗೈಯ್ಯುವವರ ಮುಖ್ಯ ಉದ್ದೇಶ ಮಕರ ಜ್ಯೋತಿ ದರ್ಶನ ಮಾಡುವುದು.





















































 
 

ಶಬರಿಮಲೆಯತ್ತ ಭಕ್ತಕೋಟಿ ಆಗಮಿಸುತ್ತಿರುವ ಹಿನ್ನೆಲೆ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಭಕ್ತರಿಗಾಗಿ ವಿಶೇಷವಾಗಿ 1,000 ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ಅಯ್ಯಪ್ಪನ ಭಕ್ತರ ವ್ರತ ಈ ಮಕರ ಸಂಕ್ರಾಂತಿಯಂದು ಅಂತ್ಯಗೊಳ್ಳುತ್ತದೆ.

ಮಕರ ಜ್ಯೋತಿ ದರ್ಶನಕ್ಕಾಗಿ ಭಾರಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರು ದರ್ಶನಕ್ಕಾಗಿ ಜಮಾಯಿಸುವ ಎಲ್ಲ ಸ್ಥಳಗಳಲ್ಲಿ ಬ್ಯಾರಿಕೇಟ್‌ಗಳನ್ನು ಹಾಕಿ ಜನಜಂಗುಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ವಂ ಬೋರ್ಡ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

51 ಲಕ್ಷ ಭಕ್ತರ ಭೇಟಿ

ಈ ಸಲದ ಮಂಡಲ ಪೂಜೆ ಮತ್ತು ಮಕರ ಬೆಳಕು ಋತುವಿನಲ್ಲಿ ಶಬರಿಮಲೆಗೆ 51 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ನವಂಬರ್‌ 16ರಿಂದ ತೊಡಗಿ ಜ.12ರ ತನಕದ ಲೆಕ್ಕಾಚಾರದ ಪ್ರಕಾರ ಅಯ್ಯಪ್ಪನ ದರ್ಶನ ಮಾಡಿದ ಭಕ್ತರ ಸಂಖ್ಯೆ 51 ಲಕ್ಷ ದಾಟಿದೆ. ವರ್ಷದಿಂದ ವರ್ಷಕ್ಕೆ ಶಬರಿಮಲೆಗೆ ಬರುತ್ತಿರುವ ಅಯ್ಯಪ್ಪ ವ್ರತಧಾರಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 48 ಲಕ್ಷ ಭಕ್ತರು ಶಬರೆಮಲೆ ಯಾತ್ರೆಗೈದಿದ್ದರು.

ಈ ವರ್ಷ ಇಷ್ಟರಲ್ಲೇ ಅಯ್ಯಪ್ಪನ ಹುಂಡಿಗೆ 429 ಕೋ. ರೂ. ಕಾಣಿಕೆ ಹರಿದುಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ 380 ಕೋ. ರೂ. ಕಾಣಿಕೆ ಸಂಗ್ರಹವಾಗಿತ್ತು.

error: Content is protected !!
Scroll to Top