ಬೆಂಗಳೂರು: ಪತಿಯಿಂದ ಮೋಸಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಹೇಳಿ ಆಕೆ ಯಿಂದ 16 ಲಕ್ಷ ರೂ. ದೋಚಿದ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ, ಜಾತಿ ನಿಂದನೆ ಮಾಡಿದ ಕರುನಾಡು ಎಂಬ ಖಾಸಗಿ ಚಾನಲ್‌ನ ಎಂಡಿಯನ್ನು ಡಿಸಿಆರ್‌ಇ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹನೀಫ್ ಎಂದು ಗುರುತಿಸಲಾಗಿದೆ.
ಬಿಟಿಎಂ ಲೇಔಟ್ ನಿವಾಸಿ ಮಹಿಳೆಯಿಂದ 16 ಲಕ್ಷ ರೂ. ಪಡೆದು ವಂಚಿಸಿದಲ್ಲದೆ, ಆಕೆಯ ಜಾತಿ ಬಗ್ಗೆ ಅಸಭ್ಯವಾಗಿ ನಿಂದಿಸಿದ್ದ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಸಿ ಎಸ್ಟಿ ಕಾಯ್ದೆ ದಾಖಲಿಸಿದ್ದರಿಂದ ಡಿಸಿಆರ್‌ಇಗೆ ಕೇಸ್ ವರ್ಗಾವಣೆ ಮಾಡಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ.
ಕೌಟುಂಬಿಕ ವಿಚಾರಕ್ಕೆ 2016ರಲ್ಲಿ ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಅಲ್ಲದೆ, ಇಬ್ಬರು ಮಾಕಳಿಯಲ್ಲಿ ಖಾಸಗಿ ಶಾಲೆಯೊಂದನ್ನು ನಡೆಸುತ್ತಿದ್ದರು. ಆದರೆ, ಅವರ ಪತಿ ಮಾಹಿತಿ ನೀಡದೆ, ಶಾಲೆಯನ್ನು ಬೇರೆಯವರಿಗೆ ಮಾರಿದ್ದರು. ಈ ಸಂಬಂಧ ಮಾಧ್ಯಮಗಳ ಮೊರೆ ಹೋಗಲು ನಿರ್ಧರಿಸಿದಾಗ ಅಶೋಕ್ ಎಂಬಾತನ ಮೂಲಕ ಮೊಹಮ್ಮದ್ ಹನೀಫ್ ಪರಿಚಯವಾಗಿದ್ದಾನೆ. ಬಳಿಕ ಆತನ ಕೊಡಿಗೇಹಳ್ಳಿಯಲ್ಲಿರುವ ಕರುನಾಡ ಚಾನಲ್‌ನ ಕಚೇರಿಗೆ ಕರೆಸಿಕೊಂಡ ಆರೋಪಿ, ನಾನು ಚಾನಲ್‌ನ ಎಂಡಿ. ಜತೆಗೆ ಸಿಟಿಜನ್ ಲೇಬರ್ ವೆಲ್ ಫೇರ್ ಆ್ಯಂಡ್ ಆಂಟಿ ಕರಪ್ಯನ್ ಕಮಿಟಿ ಎಂಬ ಎನ್ ಜಿಓ ಚೇರ್‌ವುನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದು, ಈ ರೀತಿಯ ಕೇಸ್‌ಗಳನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥ ಪಡಿಸುತ್ತೇನೆ ಎಂದು ಭರವಸೆ ನೀಡಿದ್ದ. ಬಳಿಕ ಇಬ್ಬರು ಸ್ನೇಹಿತರಾಗಿದ್ದಾರೆ. ಅಲ್ಲದೆ, ಸಂತ್ರಸ್ತೆಯನ್ನು ಆತನ ಎನ್‌ಜಿಓ ಸಂಸ್ಥೆ ರಾಜ್ಯಾಧ್ಯಕ್ಷೆಯಾಗಿ ಮಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಹಣಕಾಸಿನ ಅಅವಶ್ಯಕತೆ ಇದೆ ಎಂದು ಹಂತ-ಹಂತವಾಗಿ ಸಂತ್ರಸ್ತೆಯಿಂದ ಆರೋಪಿ 16 ಲಕ್ಷ ರೂ. ಪಡೆದುಕೊಂಡಿದ್ದಾನೆ. ಅಲ್ಲದೆ, ಶಾಲೆ ಕೇಸ್ ಬಗೆಹರಿಸಬೇಕಾದರೆ, ಕೇರಳ ಮೂಲದ ಗುರುಗಳ ಬಳಿಯ ಮದ್ದು ಮಾಡಿಸಿಕೊಡುತ್ತೇನೆ ಎಂದು ಪೂಜೆಗಳನ್ನು ಮಾಡಿಸಿದ್ದಾನೆ. ನಂತರ ಆತನ ಮನೆಗೆ ಹೋದಾಗ ಟೀಯಲ್ಲಿ ಮದ್ದು ಹಾಕಿ ಆಕೆ ಜತೆ ಲೈಂಗಿಕ ವಿಚಾರಗಳನ್ನು ಮಾತನಾಡಿ, ಖಾಸಗಿ ಭಾಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಬಳಿಕ ನಾಯಂಡಹಳ್ಳಿಯ ಕಚೇರಿಯಲ್ಲೂ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದ. ಅದನ್ನು ಪ್ರಶ್ನಿಸಿದಾಗ ನನ್ನನ್ನು ಮದುವೆ ಮಾಡಿಕೊ ಎಂದು ಪೀಡಿಸಿದ್ದಾನೆ. ಅದಕ್ಕೆ ನಿರಾಕರಿಸಿದಾಗ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಡಿಸಿಆರ್‌ಐ ಎಸ್ಪಿ ಕಾಶಿ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
























