ಬೆಂಗಳೂರು: ಖಾಸಗಿ ವಾಹಿನಿ ಪವರ್ ಟಿವಿಯ ಎಂಡಿ ರಾಕೇಶ್ ಶೆಟ್ಟಿಗೆ ಮೂರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ರಾಕೇಶ್ ಶೆಟ್ಟಿ ಮತ್ತು ‘ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಸಿವಿಲ್ ವ್ಯಾಜ್ಯವೊಂದನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಸೆಪ್ಟೆಂಬರ್ 8ರಂದು ನ್ಯಾಯಾಲಯವು ಮಧ್ಯಂತರ ಆದೇಶವೊಂದನ್ನು ನೀಡಿತ್ತು. ಆದರೆ, ಈ ಆದೇಶವನ್ನು ಪ್ರತಿವಾದಿ ರಾಕೇಶ್ ಶೆಟ್ಟಿ ಅವರು ಉಲ್ಲಂಘಿಸಿದ್ದಾರೆ ಎಂದು ರವಿಕಾಂತೇಗೌಡ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ‘ರಾಕೇಶ್ ಶೆಟ್ಟಿ ನ್ಯಾಯಾಲಯದ ಆದೇಶಕ್ಕೆ ಅವಿಧೇಯತೆ ತೋರಿಸಿರುವುದು ಸಾಬೀತಾಗಿದ್ದು, ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ. ಹಾಗೆಯೇ ರಾಕೇಶ್ ಶೆಟ್ಟಿ ಜೈಲಿನಲ್ಲಿರುವ ಮೂರು ತಿಂಗಳ ಕಾಲ ಅವರ ಖರ್ಚು ವೆಚ್ಚಗಳನ್ನು ದೂರುದಾರ ಬಿ. ಆರ್. ರವಿಕಾಂತೇಗೌಡ ಅವರೇ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
























