ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ನ್ಯೂಜಿಲೆಂಡ್
ರಾಜ್‌ಕೋಟ್: ನ್ಯೂಝಿಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಕಿರುಸರಣಿಯ ಎರಡನೇ ಪಂದ್ಯ ಇಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಗೆದ್ದಬೀಗಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ. ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ವಡೋದರಾದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಟೀಮ್ ಇಂಡಿಯಾಗೆ ಯುವ ಆಲ್ರೌಂಡರ್ ಆಯುಷ್ ಬದೋನಿ ಆಯ್ಕೆಯಾಗಿದ್ದಾರೆ.
ಭಾರತ ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ನ್ಯೂಜಿಲೆಂಡ್ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸುವುದರ ಜೊತೆಗೆ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಮೊದಲ ಪಂದ್ಯದಲ್ಲಿ ಆಡಿದ್ದ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಗುಳಿದಿರುವ ಕಾರಣ ದ್ವಿತೀಯ ಪಂದ್ಯದಲ್ಲಿ ಮತ್ತೋರ್ವ ಆಲ್ರೌಂಡರ್ಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು. ಅದರಂತೆ ಈ ಬಾರಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಆರಂಭಿಕರಾಗಿ ಈ ಪಂದ್ಯದಲ್ಲೂ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕ ವಿರಾಟ್ ಕೊಹ್ಲಿಗೆ ಫಿಕ್ಸ್. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ಐದನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಯಲಿದ್ದಾರೆ. ಬೌಲರ್ಗಳಾಗಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ.
ಭಾರತ ಏಕದಿನ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆಯುಷ್ ಬದೋನಿ.
ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.
























