ಮಡಂತ್ಯಾರ್: ಬೆಳಗ್ಗೆ ಧನುಪೂಜೆಗೆಂದು ಮನೆಯಿಂದ ದೇವಸ್ಥಾನಕ್ಕೆ ಹೋದ ಬಾಲಕ ನಾಪತ್ತೆ ಪ್ರಕರಣ ದುಃಖಾಂತ್ಯವಾಗಿದ್ದು, ಬಾಲಕನ ಮೃತ ದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಎಂದಿನಂತೆ ಗೆಳೆಯರ ಜೊತೆಗೆ ಧನುಪೂಜೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಸಂಬೋಳ್ಯದ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ 9 ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಮೃತ ದುರ್ದೈವಿ.
ಎಂದಿನಂತೆ ಆತನ ಗೆಳೆಯರು ಧನುಪೂಜೆಗೆ ಹೋಗಲು ಆತನಿಗಾಗಿ ಕಾದಿದ್ದು, ಆತ ಬರದೇ ಇದ್ದಾಗ ಅವರು ಪೂಜೆಗೆ ತೆರಳಿದ್ದಾರೆ. ಪೂಜೆ ಯಿಂದ. ಮರಳಿ ಸುಮಂತ್ ಮನೆಗೆ ಕರೆ ಮಾಡಿದಾಗ ಆತ ಧನುಪೂಜೆಗೆಂದು ತೆರಳಿದ್ದಾಗಿ ಮನೆಯವರು ಹೇಳುತ್ತಾರೆ. ಆದರೆ ಆತ ನಮ್ಮೊಂದಿಗೆ ಬಂದಿಲ್ಲ ಎಂದು ಸ್ನೇಹಿತರು ಹೇಳಿದಾಗ ಗಾಬರಿಯಾಗಿ ಮನೆಯವರು ಹುಡುಕಾಟ ನಡೆಸುತ್ತಾರೆ.
ಬಾಲಕ ಹೋಗುವ ದಾರಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದು, ಪೊಲೀಸರು, ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸಹ ಹುಡುಕಾಟ ನಡೆಸಿತ್ತು.
ಕೊನೆಗೂ ನಾಪತ್ತೆಯಾದ ಬಾಲಕ ಜೀವಂತವಾಗಿ ಸಿಗದೆ, ಆತನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
























