ಬಾಂಗ್ಲಾದೇಶದವನು ಎಂದು ಭಾವಿಸಿ ಹಲ್ಲೆ
ಮಂಗಳೂರು: ಬಾಂಗ್ಲಾದೇಶದ ಪ್ರಜೆ ಎಂದು ಭಾವಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೂಳೂರು ಗ್ರಾಮ ನಿವಾಸಿಗಳಾದ ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜ.11ರಂದು ಸಂಜೆ ನಾಲ್ವರು ಆರೋಪಿಗಳು ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬವರನ್ನು ತಡೆದು ನಿಲ್ಲಿಸಿ, ನೀನು ಹಿಂದೂನಾ? ಮುಸ್ಲಿಮ್? ಎಂದು ಪ್ರಶ್ನಿಸಿ ಜನಾಂಗೀಯ ನಿಂದನೆ ಮಾಡಿದ್ದಲ್ಲದೆ, ನೀನು ಬಾಂಗ್ಲಾದೇಶದವನು ಎಂದು ಹೇಳಿ ನಿಂದಿಸಿದ್ದಾರೆ. ಸಾರಣೆ ಮಾಡುವ ತಾಪಿಯಿಂದ ತನ್ನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲ್ಜಾನ್ ಅನ್ಸಾರಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಜ.12ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026 ಕಲಂ 126(2), 352, 351(3), 353, 109, 118(1) ಹಾಗೂ 3(5) ಭಾರತೀಯ ನ್ಯಾಯ ಸಂಹಿತೆ–2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸೋಮವಾರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























