ಸದ್ದಿಲ್ಲದೆ ಕ್ರೀಡಾಂಗಣದ ಹೆಸರು ಬದಲಾವಣೆ ; ಕಾಂಗ್ರೆಸ್‌ಗೆ ತೀವ್ರ ಮುಜುಗರ
ಬೆಂಗಳೂರು: ತುಮಕೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಕಾಂಗ್ರೆಸ್ ನಾಯಕ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸಟ್ಟಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ. ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧಿ ಹೆಸರು ಕೈ ಬಿಟ್ಟು ರಾಮನ ಹೆಸರಿಟ್ಟಿದ್ದಕ್ಕೆ ಇಡೀ ದೇಶದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ ಕರ್ನಾಟಕದಲ್ಲಿ ಸದ್ದಿಲ್ಲದೆ ಗಾಂಧೀಜಿ ಹೆಸರು ಬದಲಾಯಿಸುರುವುದು ಕಾಂಗ್ರೆಸ್ ಪಾಲಿಗೆ ತೀವ್ರ ಮುಜುಗರವುಂಟು ಮಾಡಿದೆ. ಈ ಮೂಲಕ ವಿರೋಧ ಪಕ್ಷ ಬಿಜೆಪಿ ಕೈಗೆ ಕಾಂಗ್ರೆಸ್ ಹೊಸದೊಂದು ಅಸ್ತ್ರ ಕೊಟ್ಟಿದೆ.
ತುಮಕೂರು ಜಿಲ್ಲೆಯ ಏಕೈಕ ಜಿಲ್ಲಾಮಟ್ಟದ ಕ್ರೀಡಾಂಗಣ ಮಹಾತ್ಮಾ ಗಾಂಧಿ ಕ್ರೀಡಾಂಗಣ. ಎಲ್ಲ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಪ್ರಮುಖ ಕಾರ್ಯಕ್ರಮ ನಡೆಯುವುದು ಇಲ್ಲಿಯೇ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮರು ನಿರ್ಮಾಣ ಮಾಡಲಾಗಿದೆ. ಇಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಪ್ರತ್ಯೇಕ ನಾಮಫಲಕ ಇಲ್ಲದಿದ್ದರೂ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣ ಅಂತಲೇ ಅಧಿಕೃತವಾಗಿ ಕರೆಯಲಾಗುತಿತ್ತು. ಮೂರು ದಿನದ ಹಿಂದೆ ಏಕಾಏಕಿಯಾಗಿ ಈ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವರೂ ಆದ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅವರ ಹೆಸರಿನ ನಾಮಫಲಕ ಅಳವಡಿಸಲಾಗಿದೆ. ಸುಮಾರು ಐದು ಕಡೆ ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಎಂದು ನಾಮಫಲಕ ಅಳವಡಿಸಿದ್ದಾರೆ. ಇದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಜಿಲ್ಲಾ ಬಿಜೆಪಿ ಘಟಕ ಇದರ ವಿರುದ್ಧ ಪ್ರತಿಭಟಿಸಿದೆ. ಪರಮೇಶ್ವರ್ ಹೆಸರನ್ನು ತೆರವುಗೊಳಿಸಿ ಪುನಃ ಗಾಂಧೀಜಿ ಹೆಸರನ್ನು ಹಾಕುವಂತೆ ಒತ್ತಾಯಿಸಿದೆ.
ಪ್ರತಿಭಟನೆಗೆ ಜಿಲ್ಲಾಡಳಿತ ಕ್ಯಾರೇ ಅಂದಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕ್ರೀಡಾಂಗಣ ಒಳಗಡೆ ನುಗ್ಗಿ ನಾಮಫಲಕ ತೆರವುಗೊಳಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯಿತು. ಕೊನೆಗೆ ಪೊಲೀಸರು ಸುಮಾರು 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು. ಯಾವುದೇ ಸರ್ಕಾರಿ ಕಟ್ಟಡಗಳಿಗೆ ನಾಮಕರಣ ಮಾಡಬೇಕಿದ್ದರೆ ಸ್ಥಳೀಯ ಸಂಸ್ಥೆ ಅಥವಾ ಸಂಬಂಧ ಪಟ್ಟ ಇಲಾಖೆಯಿಂದ ಠರಾವು ಆಗಬೇಕಿದೆ. ಇಂಥಹ ಯಾವುದೇ ಠರಾವು ಆಗದೇ ಏಕಾಏಕಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ನಗರ ಶಾಸಕ ಜ್ಯೋತಿ ಗಣೇಶ್ ಆರೋಪಿಸಿದ್ದಾರೆ. ಪಾಲಿಕೆ ವ್ಯಾಪ್ತಿಯೊಳಗೆ ಕ್ರೀಡಾಂಗಣ ಬರುವುದರಿಂದ ಪಾಲಿಕೆ ಆಗಲಿ ಅಥವಾ ಕ್ರೀಡಾ ಇಲಾಖೆಯಲ್ಲೂ ಪರಮೇಶ್ವರ್ ಹೆಸರು ಇಡುವ ಬಗ್ಗೆ ಠರಾವು ಆಗಿಲ್ಲ ಎಂದು ಗುಡುಗಿದರು.
ಜನವರಿ 16ರಿಂದ ಈ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಇಲ್ಲದಿದ್ದರೂ ಅಧಿಕಾರಿಗಳು ತರಾತುರಿಯಲ್ಲಿ ಮಹಾತ್ಮಾ ಗಾಂಧಿ ಹೆಸರಿನ ಬದಲು ಜಿ.ಪರಮೇಶ್ವರ್ ಅವರ ಹೆಸರಿನ ನಾಮಫಲಕ ಹಾಕಿದ್ದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
























