ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಆರಿಕ್ಕಾಡಿಯಲ್ಲಿ ಟೋಲ್‌ ವಸೂಲಿ ಶುರುವಾದ ದಿನವೇ ಪ್ರತಿಭಟನೆಯ ಬಿಸಿ

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಟೋಲ್‌ ವಸೂಲು ಮಾಡುವುದನ್ನು ಪ್ರತಿಭಟಿಸಲು ಸೋಮವಾರ ಬೆಳಗ್ಗೆಯೇ ಸಾವಿರಾರು ಜನರು ಜಮಾಯಿಸಿದ ಪರಿಣಾಮವಾಗಿ ಮಂಗಳೂರು-ಕಾಸರಗೋಡು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಆರಿಕ್ಕಾಡಿಯಲ್ಲಿ ಇಂದಿನಿಂದ ಟೋಲ್‌ ವಸೂಲಿ ಶುರುವಾಗಿದೆ.

ಈಗಾಗಲೇ ಕೇರಳ-ಕರ್ನಾಟಕ ಗಡಿಯಾಗಿರುವ ತಲಪ್ಪಾಡಿಯಲ್ಲಿ ಟೋಲ್‌ಗೇಟ್‌ ಇದ್ದು, ಇಲ್ಲಿಂದ ಬರೀ 20 ಕಿ.ಮೀ. ದೂರದಲ್ಲಿರುವ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೊಂದು ಟೋಲ್‌ಗೇಟ್‌ ಹಾಕಿದೆ. ಎರಡು ಟೋಲ್‌ಗೇಟ್‌ಗಳ ನಡುವೆ 60 ಕಿ.ಮೀ. ಅಂತರ ಇರಬೇಕು ಎಂಬ ನಿಯಮ ಇದ್ದರೂ, ಹೆದ್ದಾರಿ ಪ್ರಾಧಿಕಾರ ಬಲವಂತವಾಗಿ ಟೋಲ್‌ ವಸೂಲು ಮಾಡುತ್ತಿದೆ ಎಂದು ಆರೋಪಿಸಿ ಜನರು ರಸ್ತೆಗಿಳಿದಿದ್ದಾರೆ.





















































 
 

ಕಾಸರಗೋಡು ಭಾಗದ ಜನ ಶಿಕ್ಷಣ, ವ್ಯಾಪಾರ-ವಹಿವಾಟು, ಆಸ್ಪತ್ರೆ ಎಂದು ಬಹುತೇಕ ಎಲ್ಲ ಅಗತ್ಯಗಳಿಗೆ ಮಂಗಳೂರನ್ನು ಅವಲಂಬಿಸಿದ್ದಾರೆ. ನಿತ್ಯ ಬಸ್‌ ಸೇರಿದಂತೆ ಸಾವಿರಾರು ವಾಹನಗಳು ಕಾಸರಗೋಡು-ಮಂಗಳೂರು ನಡುವೆ ಓಡಾಡುತ್ತವೆ. ಆರಿಕ್ಕಾಡಿಯಲ್ಲಿ ಟೋಲ್‌ ವಸೂಲು ಮಾಡುವುದು ಜನರನ್ನು ಹಗಲು ದರೋಡೆ ಮಾಡಿದಂತೆ ಎಂದು ಆರೋಪಿಸಿ ಸಾವಿರಾರು ಜನರು ಬೆಳಗ್ಗೆ 7 ಗಂಟೆಗೆ ಟೋಲ್‌ಗೇಟ್‌ ಸಮೀಪ ಜಮಾಯಿಸಿ ಪ್ರತಿಭಟನೆಯಲ್ಲಿ ತೊಡಗಿದರು.

ಮಂಜೇಶ್ವರ ಶಾಸಕ ಎ.ಕೆ.ಎಂ. ಆಶ್ರಫ್‌ ನೇತೃತ್ವದಲ್ಲಿ ಟೋಲ್‌ಗೇಟ್‌ ವಿರೋಧಿಸಲು ಸರ್ವಪಕ್ಷ ಕ್ರಿಯಾ ಸಮಿತಿ ರಚಿಸಲಾಗಿದೆ. ಟೋಲ್‌ಗೆಟನ್ನು ಪೆರಿಯಕ್ಕೆ ಸ್ಥಳಾಂತರಿಸುವ ತನಕ ಆರಿಕ್ಕಾಡಿಯಲ್ಲಿ ಟೋಲ್‌ ಸಂಗ್ರಹಕ್ಕೆ ಅವಕಾಶ ಕೊಡುವುದಿಲ್ಲ ಎಂದು ಆಶ್ರಫ್‌ ಎಚ್ಚರಿಸಿದ್ದಾರೆ. ಪೊಲೀಸರು ಟೋಲ್‌ಗೇಟ್‌ನ ಎರಡೂ ಕಡೆ ತಡಬೇಲಿ ಹಾಕಿದ ಕಾರಣ ವಾಹನಗಳ ಓಡಾಟಕ್ಕೆ ಮತ್ತಷ್ಟು ಅಡಚಣೆ ಉಂಟಾಯಿತು. ಪ್ರತಿಭಟನೆಕಾರರು ಆಂಬುಲೆನ್ಸ್‌ಗಳಿಗೆ ಮಾತ್ರ ಹೋಗಲು ಅವಕಾಶ ಕೊಟ್ಟರು.

error: Content is protected !!
Scroll to Top