ಅಮೆರಿಕದಲ್ಲಿ ದುಡಿದು ಗಳೆಸಿದ್ದೆಲ್ಲವನ್ನು ಎರಡು ವಾರದಲ್ಲಿ ಕಳೆದುಕೊಂಡ ವೈದ್ಯ ದಂಪತಿ
ನವದೆಹಲಿ : ಅನಿವಾಸಿ ಭಾರತೀಯ ವೃದ್ಧ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ ಸುಮಾರು 15 ಕೋ. ರೂ. ಲಪಟಾಯಿಸಿದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವೈದ್ಯರಾಗಿ ದುಡಿದು ಗಳಿಸಿದ್ದನ್ನೆಲ್ಲ ಈ ವೃದ್ಧ ವೈದ್ಯರು ಬರೀ ಎರಡು ವಾರದಲ್ಲಿ ಕಳೆದುಕೊಂಡಿದ್ದಾರೆ.
ಡಾ.ಓಂ ತನೇಜಾ ಮತ್ತು ಡಾ.ಇಂದಿರಾ ತನೇಜಾ ಅವರನ್ನು ಸೈಬರ್ ವಂಚಕರು ಎರಡು ವಾರಕ್ಕೂ ಅಧಿಕ ಕಾಲ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿ 14.85 ಕೋಟಿ ರೂ. ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
48 ವರ್ಷ ಅಮೆರಿಕದಲ್ಲಿ ವೈದ್ಯರಾಗಿ ದುಡಿದು 2015ರಲ್ಲಿ ಈ ವೃದ್ಧ ದಂಪತಿ ಹುಟ್ಟೂರಿಗೆ ಮರಳಿದ್ದರು. ದೆಹಲಿಯಲ್ಲಿ ಅನೇಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿದ್ದ ದಂಪತಿ ಇಷ್ಟು ಸುಲಭದಲ್ಲಿ ಮೋಸ ಹೋಗಿರುವುದು ಆಶ್ಚರ್ಯವುಂಟು ಮಾಡಿದೆ. ಕಳೆದ ಡಿಸೆಂಬರ್ 24ರಂದು ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ಫೋನ್ ಮಾಡಿ ಬೆದರಿಸಲು ತೊಡಗಿದಾಗ ಈ ಕೃತ್ಯ ಶುರುವಾಗಿದೆ.
ಅಕ್ರಮ ಹಣ ವರ್ಗಾವಣೆಗೆ ನಿಮ್ಮ ಬ್ಯಾಂಕ್ ಖಾತೆಗಳು ಬಳಕೆಯಗಿವೆ ಎಂದು ಹೇಳಿ ವಂಚಕರು ಅವರನ್ನು ಹೆದರಿಸಿದ್ದರು. ನಂತರ ತಮ್ಮ ಮಾಮೂಲಿ ಕಾರ್ಯಶೈಲಿ ಪ್ರಕಾರ ಯಾರಿಗೂ ತಿಳಿಸಬಾರದು, ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಬಾರದು ಎಂದೆಲ್ಲ ಬೆದರಿಸಿ ಜ.10ರ ತನಕ ಎಂಟು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ.
ಒಂದೊಂದು ಸಲ 2 ಕೋಟಿ ತನಕ ಒಮ್ಮೆಲೆ ಹಣ ವರ್ಗಾಯಿಸಿಕೊಂಡಿದ್ದು, ತೀರಾ ಬೆದರಿದ್ದ ವೃದ್ಧರು ಅವರ ಹೇಳಿದಾಗಲೆಲ್ಲ ಖಾತೆಗಳಿಗೆ ಹಣ ಹಾಕಿದ್ದರು. ವಂಚಕರು ವೀಡಿಯೊ ಕಾಲ್ ಮೂಲಕ ವೈದ್ಯ ದಂಪತಿಯ ಚಲನವಲನಗಳನ್ನು ಗಮನಿಸುತ್ತಿದ್ದರು. ಡಾ.ಇಂದಿರಾ ತನೇಜಾ ಫೋನ್ ಕಾಲ್ ಮಾಡಲು ಮನೆಯಿಂದ ಹೊರಗೆ ಹೋದಾಗಲೆಲ್ಲ ವಂಚಕರು ಡಾ.ಓಂ ತನೇಜಾಗೆ ವೀಡಿಯೊ ಕಾಲ್ ಮಾಡಿ ಹೆದರಿಸಿ ಡಾ.ಇಂದಿರಾ ವಾಪಸ್ ಬರುವಂತೆ ಮಾಡುತ್ತಿದ್ದರು.
ಬ್ಯಾಂಕ್ ಮ್ಯಾನೇಜರ್ ಇಷ್ಟೊಂದು ದೊಡ್ಡ ಮೊತ್ತ ವರ್ಗಾಯಿಸುವುದು ಏಕೆ ಎಂದು ಕೇಳಿದಾಗ ವಂಚಕರು ಹೇಳಿದ ಕಥೆಯನ್ನೇ ಡಾ.ಇಂದಿರಾ ಹೇಳಿದ್ದರು. ಜ.10ರಂದು ವಂಚಕರು ಡಾ.ಇಂದಿರಾಗೆ ಫೋನ್ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ, ನೀವು ಹೋಗಿ ಬರುವಷ್ಟರಲ್ಲಿ ಎಲ್ಲ ಹಣ ನಿಮ್ಮ ಖಾತೆಗೆ ಆರ್‌ಬಿಐಯಿಂದ ಬಂದಿರುತ್ತದೆ ಎಂದು ಹೇಳಿದ್ದಾರೆ.
ಡಾ.ಇಂದಿರಾ ವಂಚಕರ ಜೊತೆಗೆ ಮಾತನಾಡುತ್ತಲೇ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಠಾಣೆಯ ಸ್ಟೇ಼ನ್ ಹೌಸ್ ಆಫೀಸರ್ ಜೊತೆ ಕೂಡ ವಂಚಕರು ಇದೇ ಕರೆಯಲ್ಲಿ ಮಾತನಾಡಿದ್ದಾರೆ. ಪೊಲೀಸ್ ಅಧಿಕಾರಿ ಜೊತೆ ಕೂಡ ಅವರು ಒರಟಾಗಿ ಮಾತನಾಡಿದ್ದಾರಂತೆ. ಜೀವಮಾನದಲ್ಲಿ ಗಳಿಸಿದ್ದಲ್ಲವನ್ನೂ ಕಳೆದುಕೊಂಡು ಈ ವೃದ್ಧ ದಂಪತಿ ಈಗ ತೀವ್ರ ಆಘಾತದಲ್ಲಿದ್ದಾರೆ.
























