ಪುತ್ತೂರು: ಕೃಷಿ ವಲಯದಲ್ಲಿ ನಾವೀನ್ಯತೆಯನ್ನು ಅಳವಡಿಕೆ ಮಾಡಿಕೊಳ್ಳುವುದು ಇಂದಿನ ಅಗತ್ಯ. ರೈತರು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸುವ ಮುಖೇನ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಅವರು ನಿನ್ನೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣಲು ಸಮಯಾವಕಾಶ ಬೇಕು. ಕೃಷಿಕರು ಮಣ್ಣಿನ ಗುಣಮಟ್ಟಕ್ಕೆ ಅನುಸಾರವಾಗಿ ಸಮ್ಮಿಶ್ರ ಬೆಳೆಗಳನ್ನು ಬೆಳೆಯುವತ್ತ ಗಮನ ನೀಡಬೇಕು ಎಂದರು. ಜೊತೆಗೆ ಸರ್ಕಾರ ರೈತರಿಗೆ ನೀಡುವ ವಿಮಾ ಯೋಜನೆಗಳಿಗೆ ಸಂಬಂಧಿಸಿದ ಹಾಗೆಯೂ ಅವರು ಮಾಹಿತಿ ನೀಡಿದರು. ಈ ಯೋಜನೆಯಲ್ಲಿ ಪ್ರಸ್ತುತ ಸುಮಾರು 27 ಲಕ್ಷಕ್ಕೂ ಹೆಚ್ಚಿನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ 5 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ವಿತರಣೆ ಮಾಡಲಾಗಿದೆ. 2.5 ಸಾವಿರ ಕೋಟಿಗೂ ಅಧಿಕ ಪ್ರೋತ್ಸಾಹ ಧನ ನೀಡಿರುವುದಾಗಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅವುಗಳ ಬಗ್ಗೆ ಕೃಷಿಕರಿಗೆ ಮಾಹಿತಿಯ ಕೊರತೆ ಇದೆ. ರೈತರಿಗೆ ಹವಾಮಾನ ಆಧಾರಿತ ವಿಮೆ ಸರಿಯಾಗಿ ದೊರೆಯುತ್ತಿಲ್ಲ. ವಿಮಾ ಮೊತ್ತದ ಪ್ರಮಾಣ ಸಹ ಜಿಲ್ಲೆಗೆ ಕಡಿಮೆಯಾಗಿದೆ. ಅಡಿಕೆ, ರಬ್ಬರ್ ಬೆಳೆಗಳನ್ನು ಕೃಷಿ ಬೆಳೆಯನ್ನಾಗಿ ಪರಿಗಣಿಸುವಂತೆಯೂ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕುಮ್ಕಿ ಜಾಗದ ಹಕ್ಕನ್ನು ರೈತರಿಗೆ ಒದಗಿಸಲು ಸರ್ಕಾರದ ಸಹಕಾರದ ಅಗತ್ಯ ಇರುವುದಾಗಿ ನುಡಿದರು. ಕೃಷಿಯ ಮೇಲೆ ಕಾಡು ಪ್ರಾಣಿಗಳ ಸಮಸ್ಯೆಯ ಬಗೆಗೂ ಅವರು ಸಚಿವರ ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕೃಷಿಕ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಗೌಡ ಎಸ್. ಆರ್., ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ಲಾವಣ್ಯ ಬಲ್ಲಾಳ್ ಜೈನ್, ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಾಹೀದ್ ತೆಕ್ಕಿಲ್, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೃಷಿ ಇಲಾಖೆಯ ಕೆಂಪೇಗೌಡ ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ ಸ್ವಾಗತಿಸಿದರು. ಸಮಿತಿ ಸಂಚಾಲಕ ಸಂಜೀವ ಮಠಂದೂರು ಪ್ರಸ್ತಾಪಿಸಿದರು. ಉಪಾಧ್ಯಕ್ಷ ಚಂದ್ರ ಕೋಲ್ಚಾರು ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಕೋಶಾಧಿಕಾರಿ ಕು ಸು ಮಾ ದರ ಎ. ಟಿ. ವಂದಿಸಿದರು.
ವನ್ಯಜೀವಿ ಸಂಘರ್ಷ ತಡೆಗಟ್ಟಲು ಕ್ರಮ, ಅಡಕೆ ರೋಗ ಬಾಧೆ ನಿರ್ವಹಣೆ ಮತ್ತು ಹಡೀಲು ಭೂಮಿ ಕೃಷಿಗೆ ಪ್ರೋತ್ಸಾಹ ನೀಡುವಂತೆ ಸಚಿವರಿಗೆ ಸಾರ್ವಜನಿಕ ಮನವಿ ಸಲ್ಲಿಸಲಾಯಿತು.
ಸಾಧಕರಿಗೆ ಸನ್ಮಾನ
ಕೃಷಿ ಸಾಧಕ ಪುರಸ್ಕಾರವನ್ನು ಪಂಜಿಗುಡ್ಡೆ ಈಶ್ವರ ಭಟ್, ಕೆ. ಪ್ರೇಮನಾಥ ಶೆಟ್ಟಿ ಕೊರ್ಯ, ಟಿ. ಜಿ. ರಾಜಾರಾಮ ಭಟ್, ಕಾಂತಪ್ಪ ಪೂಜಾರಿ, ಅರವಿಂದ ಮುಳ್ಳಂಕೊಚ್ಚಿ. ಡಿ. ಎನ್. ಚಂದ್ರಶೇಖರ, ಸಿರಿಲಿಯಾ ಸಲ್ದಾನ, ಪ್ರಿಸಿಯು ಎಚ್. ಡಿಸೋಜ, ನಾಗಪ್ಪ ಪೂಜಾರಿ ಸನ್ಮಾನಿಸಲಾಯಿತು. ಕೃಷಿ ಕೂಲಿ ಕಾರ್ಮಿಕ ಪ್ರಶಸ್ತಿ ವೆಂಕಪ್ಪ ಜಿ. ಗೋಳ್ತಮಜಲು, ಲಿಂಗಪ್ಪ ಮಡಿವಾಳ, ಮೊಹನ್ ದಾಸ್ ಕಾಮತ್, ಶೀನಪ್ಪ ಪೂಜಾರಿ ಹೊಸಮಠ, ತೀರ್ಥರಾಮ ಬೈತ್ತಡ್ಕ, ಉದ್ಯಮಿ ಪುರಸ್ಕಾರ ಕೇಶವ ಗೌಡ ಅಮೈಗುತ್ತು, ಕೆ. ಪಿ. ಮಹಮ್ಮದ್ ಸಾದಿಕ್, ಪುರುಷೋತ್ತಮ ಬಿ. ಅವರನ್ನು ಗೌರವಿಸಲಾಯಿತು.
























