ಕಾರ್ಕಳ: ಪರಶುರಾಮ ಥೀಮ್‌ ಪಾರ್ಕ್‌ನ ತಾಮ್ರದ ಶೀಟ್‌ ಕಳವು ಮಾಡಿದವರು ಸೆರೆ

ರಾಜಕೀಯ ಕಾರಣಗಳಿಗಾಗಿ ಭಾರಿ ವಿವಾದಕ್ಕೊಳಗಾಗಿದ್ದ ಪ್ರಕರಣ

ಕಾರ್ಕಳ : ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಶೀಟ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಳವಾರು ಚರ್ಚ್ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಜ.3ರಂದು ಥೀಮ್‌ ಪಾರ್ಕ್‌ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಹಾಗೂ ರಾಜಕೀಯ ಸೂಕ್ಷ್ಮವನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರೀರಾಂ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ವಿಶೇಷ ಪೊಲೀಸ್ ತಂಡ ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದೆ.





















































 
 

ಬಂಧಿತರಿಂದ ಕಳವು ಮಾಡಿದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ ಹಾಗೂ 1200 ರೂ. ಮೌಲ್ಯದ 2 ಸೀಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ. ಮೌಲ್ಯದ ಗೂಡ್ಸ್‌ ಅಟೋರಿಕ್ಷಾ, 70,000ರೂ. ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿ ಆರೀಫ್ ವಿರುದ್ಧ ಪಡುಬಿದ್ರೆ, ಉಡುಪಿ ನಗರ, ಬ್ರಹ್ಮಾವರ ಪೊಲೀಸ್‌ ಠಾಣೆ, ಕಾರ್ಕಳ ಗ್ರಾಮಾಂತರ ಹಾಗೂ ಮೂಲ್ಕಿ ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಮೀದ್ ವಿರುದ್ಧ ಬಜಪೆ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

error: Content is protected !!
Scroll to Top