ಭದ್ರತೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಳವಳ
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಜ.7ರಂದು ಈಶ್ವರಪ್ಪ ಅವರಿಗೆ ವಿದೇಶದಿಂದ ಬಂದ ಬೆದರಿಕೆ ಕರೆ ಅವರ ಭದ್ರತೆ ಕುರಿತಾಗಿ ಮತ್ತೊಮ್ಮೆ ಆತಂಕ ಹುಟ್ಟುಹಾಕಿದೆ.
ಈಶ್ವರಪ್ಪ ಅವರಿಗೆ ಈ ಹಿಂದೆಯೂ ಬೆದರಿಕೆ ಕರೆಗಳು ಬಂದ ಹಿನ್ನೆಲೆ ಪೊಲೀಸ್ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ಅವರ ಎಸ್ಕಾರ್ಟ್ ಹಾಗೂ ಪೊಲೀಸ್ ಭದ್ರತೆಯನ್ನು ಹಿಂಪಡೆದಿದೆ. ಇದೀಗ ಮತ್ತೊಮ್ಮೆ ಬೆದರಿಕೆ ಕರೆ ಬಂದಿರುವುದರಿಂದ ಅವರ ಭದ್ರತೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
2020 ಮತ್ತು 2023ರಲ್ಲೂ ವಿದೇಶಗಳಿಂದ ಈಶ್ವರಪ್ಪ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಆ ಸಂದರ್ಭಗಳಲ್ಲಿ ಪಿಎಫ್ಐ ಕಾರ್ಯಕರ್ತರು ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಅಲ್ಲದೆ 2024ರಲ್ಲಿ ತಮ್ಮ ಬೆಂಬಲಿಗರಿಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಿವಮೊಗ್ಗ ಎಸ್ಪಿಗೆ ಈಶ್ವರಪ್ಪ ದೂರು ಸಲ್ಲಿಸಿದ್ದರು.
























