ಪಚ್ಚೆದೊಡ್ಡಿ ಗ್ರಾಮದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣದ ಆರೋಪಿ
ಬೆಂಗಳೂರು : ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದಿದ್ದ ದೈತ್ಯ ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಿನಿ ವೀರಪ್ಪನ್ನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
2025ರ ಅಕ್ಟೋಬರ್ 3ರಂದು ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಅರಣ್ಯಾಧಿಕಾರಿಗಳು ಪ್ರಮುಖ ಆರೋಪಿ ಗೋವಿಂದನನ್ನು ಬಂಧಿಸಿದ್ದಾರೆ. ಪ್ರಾಣಿಗಳ ಶಿಕಾರಿ ಮಾಡುವ ಗೋಮವಿಂದ ಮಿನಿ ವೀರಪ್ಪ ಎಂದೇ ಕುಖ್ಯಾತನಾಗಿದ್ದ.
ಹುಲಿ ಹತ್ಯೆ ಬಳಿಕ ಗೋವಿಂದ ತಲೆ ಮರೆಸಿಕೊಂಡಿದ್ದ. ಆದರೆ ಹಳೆಯ ಕೇಸ್ ಹಿನ್ನೆಲೆ ಮೈಸೂರು ನ್ಯಾಯಾಲಯಕ್ಕೆ ಹೋಗುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಣ್ಯಾಧಿಕಾರಿಗಳು ಕೋರ್ಟ್ ಆವರಣದಲ್ಲಿ ಅಲರ್ಟ್ ಆಗಿದ್ದರು. ಅದಾಗ್ಯೂ ಅಧಿಕಾರಿಗಳ ಕಣ್ತಪ್ಪಿಸಿ ಕೋರ್ಟ್ ಆವರಣದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ, ಟ್ರೈನ್ ಹತ್ತಿ ಬೇರೆಡೆಗೆ ಹೋಗಲು ಪ್ರಯತ್ನಿಸಿದ್ದ, ಆರೋಪಿಯನ್ನ ಬೆನ್ನತ್ತಿದ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಡಿಪಿ ಸಭೆ ಹಾಗೂ ಅರಣ್ಯ ಸಚಿವರ ನೇತೃತ್ವದ ಸಭೆಯಲ್ಲೂ ಎರಡು ಬಾರಿ ಮಿನಿ ವೀರಪ್ಪನ್ ವಿಚಾರ ಪ್ರಸ್ತಾಪವಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯುವಂತೆ ಒತ್ತಾಯ ಕೇಳಿಬರುತ್ತಲೇ ಇತ್ತು. ಗೋವಿಂದ ಅರಣ್ಯದಲ್ಲಿ ಗುಂಪು ಕಟ್ಟಿಕೊಂಡು ಹೋಗಿ ಶಿಕಾರಿ ಮಾಡ್ತಿದ್ದನಂತೆ. ಈತನ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
























