ಬಂಧನಕ್ಕೆ ಪ್ರತಿರೋಧ ತೋರಿದಾಗ ಥಳಿಸಿದ ವಿಡಿಯೋ ವೈರಲ್
ಬೆಂಗಳೂರು: ಇಲ್ಲಿನ ಕೇಶ್ವಾಪುರ ಠಾಣೆಯ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆಯ ಮೇಲೆ ದರ್ಪ ಮೆರೆದಿದ್ದಾರೆ ಎನ್ನಲಾಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪ್ರತಿರೋಧ ತೋರಿದ ಮಹಿಳೆಯ ಬಟ್ಟೆ ಬಿಚ್ಚಿ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಗೆ ಹಳೇ ವೈಷಮ್ಯ ಕಾರಣ ಎಂದು ಹೇಳಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್ ಡಿಲೀಟ್ ಮಾಡಿಸಿದ್ದಾರೆ ಎಂದು ಗಲಾಟೆ ಮಾಡಿದ್ದರು. ಈ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಇದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು.
ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆಕೆ ಪ್ರತಿರೋಧ ತೋರಿ ಚೀರಾಡಿದ್ದಾರೆ. ಆಗ ಪೊಲೀಸರು ಆಕೆಯನ್ನ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಹಿಳೆಯನ್ನ ಥಳಿಸಿದ್ದು ಅಲ್ಲದೇ ಬಂಧನದ ವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಿ ಜೈಲಿಗಟ್ಟಿದ್ದಾರೆ.
























