ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದರೂ, ಉಭಯ ರಾಷ್ಟ್ರಗಳ ನಡುವೆ ಬಿಗುವಿನ ಸ್ಥಿತಿ ನಿರ್ಮಾಣವಾಗಿದ್ದರೂ ಮಾನವೀಯ ನೆಲೆಯಲ್ಲಿ ಮಹತ್ವದ ಕೆಲಸವೊಂದನ್ನು ಮಾಡುವ ಮೂಲಕ ಭಾರತ ಉದಾರತೆ ಮೆರೆದಿದೆ.
ಪಶ್ಚಿಮ ಬಂಗಾಳದ ಯುವತಿಯೊಬ್ಬರು ಬಾಂಗ್ಲಾದೇಶದ ವ್ಯಕ್ತಿಯನ್ನು ಮದುವೆಯಾಗಿದ್ದು, ಆ ಮಹಿಳೆಯ ತಂದೆ ಮೃತಪಟ್ಟಿದ್ದಾರೆ. ಆದರೆ ಬಾಂಗ್ಲಾದೇಶದವರಿಗೆ ಭಾರತಕ್ಕೆ ಬರಲು ಅವಕಾಶ ಇಲ್ಲದಿದ್ದರೂ ಆ ಮಹಿಳೆಗೆ ತಂದೆಗೆ ಅಂತಿಮ ವಿದಾಯ ಸಲ್ಲಿಸುವ ನಿಟ್ಟಿನಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಅವಕಾಶವನ್ನು ಬಿಎಸ್‌ಎಫ್ ಮಾಡಿಕೊಡುವ ಮೂಲಕ ಉದಾರತೆ ಮೆರೆದಿದೆ.
ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಚಾಪ್ರಾ ಪ್ರದೇಶದ ಹತ್ತೋಲಾ ಗ್ರಾಮದ ನಿವಾಸಿ ಇಸ್ರಾಫಿಲ್ ಹಲ್ಲೋನಾ ಮೃತಪಟ್ಟಿದ್ದಾರೆ. ಆಕೆಯ ಮಗಳು ಬಾಂಗ್ಲಾದೇಶದ ಚುವಾಡಂಗಾ ಜಿಲ್ಲೆಯ ಕುತುಬ್‌ಪುರ ಗ್ರಾಮದ ವ್ಯಕ್ತಿಯನ್ನು ವಿವಾಹವಾಗಿ ಅಲ್ಲಿಯೇ ಇದ್ದರು. ಶತಾಯುಷಿ ತಂದೆಯ ಮರಣದ ಸುದ್ದಿ ತಲುಪಿದಾಗ, ಆಕೆ ಕೊನೆಯ ಬಾರಿಗೆ ನೋಡುವ ಬಯಕೆ ವ್ಯಕ್ತಪಡಿಸಿದರು. ಫೋನ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಬಳಿಕ, ಕುಟುಂಬಸ್ಥರು ಇದನ್ನು ಹತ್ತೋಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು, ಬಿಎಸ್‌ಎಫ್‌ನ 101 ನೇ ಬೆಟಾಲಿಯನ್ ಅನ್ನು ಸಂಪರ್ಕಿಸಿದ್ದಾರೆ. ಸೂಕ್ಷ್ಮತೆ ಅರಿತ ಬಿಎಸ್‌ಎಫ್ ಬಾಂಗ್ಲಾದೇಶದ ಗಡಿ ಕಾವಲು ಪಡೆಯಾದ ಬಿಜಿಬಿಗೆ ತಿಳಿಸಿದೆ. ಉಭಯ ಸೇನೆಗಳ ನಡುವೆ ಮಾತುಕತೆ ನಡೆದ ಬಳಿಕ, ಗಡಿಯ ಶೂನ್ಯ ಬಿಂದುವಿನಲ್ಲಿ ಶವವನ್ನು ತಂದು ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಹಗ್ಗೋಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅತಿಹರ್ ಹಲೋನಾ, ಶತಾಯುಷಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರ ಹೆಣ್ಣುಮಕ್ಕಳಲ್ಲಿ ಒಬ್ಬರು ಬಾಂಗ್ಲಾದೇಶದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಅವರು ತಂದೆಗೆ ಅಂತಿಮ ವಿದಾಯ ಹೇಳಲು ಬಯಸಿದ್ದರು. ನಾವು ಬಿಎಸ್‌ಎಫ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದೆವು. ನಂತರ, ಬಿಎಸ್‌ಎಫ್ ಮತ್ತು ಬಾಂಗ್ಲಾ ಸೇನೆಯ ನಡುವೆ ಸಭೆಯ ನಂತರ ಮಹಿಳೆಗೆ ಅಂತಿಮ ನಮನ ಸಲ್ಲಿಸಲು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಯಿತು. ಇಡೀ ಪ್ರಕ್ರಿಯೆಯಲ್ಲಿ ಬಿಎಸ್‌ಎಫ್ ನೇತೃತ್ವ ವಹಿಸಿತ್ತು ಎಂದು ಹೇಳಿದ್ದಾರೆ.
























