ಶವ ಹೂಳುವ ಸಂಪ್ರದಾಯದವರು ದಹನ ಮಾಡಿದ್ದು ಏಕೆ ಎಂದು ಶ್ರೀರಾಮುಲು ಪ್ರಶ್ನೆ
ಬಳ್ಳಾರಿ: ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅಂತ್ಯ ಸಂಸ್ಕಾರದ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ರಾಜಶೇಖರ ಮೃತದೇಹ ಸುಟ್ಟು ಹಾಕಿದ್ದಾರೆ ಎಂದಿರುವ ಶ್ರೀರಾಮುಲು ಹೆಚ್ಚುವರಿ ಎಸ್ಪಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ರೆಡ್ಡಿ ಸಮುದಾಯದಲ್ಲಿ ಮೃತದೇಹ ಸುಡುವುದಿಲ್ಲ ಬದಲಾಗಿ ಹೂಳುವ ಸಂಪ್ರದಾಯವಿದೆ. ಆದರೆ ರಾಜಶೇಖರ್ ರೆಡ್ಡಿ ಶವವನ್ನು ಸುಟ್ಟಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ಹೇಳಿದ್ದಾರೆ.
ಜನವರಿ 1ರಂದು ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಗಲಭೆ ನಡೆದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್ಮ್ಯಾನ್ ಗನ್ನಿಂದ ಸಿಡಿದ ಬುಲೆಟ್ ತಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಸ್ಥಳದಲ್ಲೇ ಮೃತಪಟ್ಟಿದ್ದರು.
ರಾಜಶೇಖರನ ಮರಣೋತ್ತರ ಪರೀಕ್ಷೆ ಬಗ್ಗೆ ನಿನ್ನೆ ಕೇಂದ್ರ ಸಚಿವ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಎರಡೆರಡು ಸಲ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಬೇರೆ ಬೇರೆ ವೈದ್ಯರಿಂದ ಮಾಡಿಸಿದ್ದಾರೆ. ಇದು ಸಾಕ್ಷಿ ನಾಶ ಮಾಡುವ ಹುನ್ನಾರ ಎಂದು ಹೇಳಿದ್ದರು.
ಇದೀಗ ಅಂತ್ಯಸಂಸ್ಕಾರದ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಅಂತ್ಯಸಂಸ್ಕಾರ ಮಾಡಲು ಆರಂಭದಲ್ಲಿ ಗುಂಡಿ ತೋಡಿದ್ದರು. ಅದನ್ನು ಮುಚ್ಚಿ ಮೃತದೇಹವನ್ನ ಸುಟ್ಟು ಹಾಕಿದ್ದಾರೆ. ಅಡಿಷನಲ್ ಎಸ್ಪಿ ರವಿಕುಮಾರ್ ಸೇರಿದಂತೆ ಪೊಲೀಸರು ಅವರ ಕುಟುಂಬಸ್ಥರನ್ನು ಹೆದರಿಸಿ, ಬೆದರಿಸಿ ಮೃತದೇಹ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಶೇಖರ ದೇಹ ಹೊಕ್ಕಿದ್ದು ಐದು ಬುಲೆಟ್. ದೇಹದಲ್ಲಿ ಬುಲೆಟ್ಗಳು ಉಳಿದಿದ್ದವು. ಅದು ಹೊರಗೆ ಬರಬಾರದು ಎಂದು ಸುಟ್ಟುಹಾಕಿದ್ದಾರೆ. ರೆಡ್ಡಿ ಸಂಪ್ರದಾಯದ ಪ್ರಕಾರ ಶವವನ್ನು ಹೂಳುತ್ತಾರೆ. ಆದರೆ ಇಲ್ಲಿ ಮತ್ತೆ ಪರೀಕ್ಷೆ ಮಾಡಬಾರದು ಎಂಬ ಕಾರಣಕ್ಕೆ ಸುಟ್ಟು ಹಾಕಿದ್ದಾರೆ. ಇವತ್ತಲ್ಲ ನಾಳೆ ಸತ್ಯ ಹೊರಗೆ ಬಂದೇ ಬರುತ್ತದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನನ್ನ ಮೇಲೆ ಕೊಲೆ ಕೇಸ್ ಹಾಕಿದ್ದಾರೆ. ಯಾವ್ಯಾವ ಕೇಸ್ ಹಾಕಬೇಕು ಎಂದು ಐಜಿ ಅವರು ಶಾಸಕರ ಬಳಿ ಕೇಳುತ್ತಾರೆ. ಏನೆಲ್ಲಾ ಅನಾಹುತ ಆಗಿದ್ದರೂ ಐಜಿ ಕ್ರಮ ತಗೊಂಡಿಲ್ಲ. ರಾಮುಲು, ಜನಾರ್ದನ ರೆಡ್ಡಿ ಅವರನ್ನ ಹೆದರಿಸಬೇಕು ಎಂದು 302 ಸೆಕ್ಞನ್ ಕೇಸ್ ಹಾಕಿದ್ದಾರೆ. ಗಲಾಟೆ ಆದ ಕೂಡಲೇ ನಾನು ಡಿಕೆಶಿ ಅವರಿಗೆ ಕಾಲ್ ಮಾಡಿದ್ದೆ. ನಮ್ಮ ಕೈಯಲ್ಲಿ ಇಲ್ಲ, ನಮ್ಮ ಶಕ್ತಿ ಮೀರುತ್ತಿದೆ, ಗಲಾಟೆ ತಡೆಯಲು ನಮ್ಮ ಬಳಿ ಶಕ್ತಿ ಇಲ್ಲ ಎಂದು ಹೇಳಿದ್ದರು ಅವರು ಅದನ್ನ ಒಪ್ಪಿಕೊಂಡಿದ್ದಾರೆ. ರಾಜಕಾರಣ, ಪಕ್ಷ ಹೊರತುಪಡಿಸಿ ಅವರು ನನ್ನ ಸ್ನೇಹಿತರು. ಅವರಿಗೆ ನಮ್ಮನ್ನು ರಕ್ಷಣೆ ಮಾಡಿ ಎಂದು ಹೇಳಿದ್ದೆ ಎಂದರು.
ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿದ್ದು ಮಾಡಿದ್ದು ಸರಿಯಲ್ಲ. ಇದೀಗ ಪವನ್ ನೆಜ್ಜೂರ್ ಎಲ್ಲಿದ್ದಾರೆ? ಅವರು ಇದ್ದಾರೋ, ಇಲ್ವೋ ಎನ್ನುವುದನ್ನು ಈ ನಾಡಿನ ಜನರಿಗೆ ತಿಳಿಸಬೇಕು. ಈ ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಕೊಲೆಗಳಾಗ್ತವೆ. ಅಧಿಕಾರಿಗಳ ಸಾವಾಗ್ತವೆ. ಇದೊಂದು ಕೊಲೆಗಡುಕ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ನಡುವೆ ಬಳ್ಳಾರಿ ಬ್ಯಾನರ್ ಗಲಾಟೆ ವೇಳೆ ಮಡಿದ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಸ್ಥರಿಗೆ 25 ಲಕ್ಷ ರೂ. ನಗದು ಪರಿಹಾರ ನೀಡಿದ ಆರೋಪದಡಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಐಟಿ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.
ಹಿಂದೂ ಮುಖಂಡ ತೇಜಸ್ ಗೌಡ ಅವರು ಸಚಿವ ಜಮೀರ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. ಆರ್ಬಿಐ ನಿಯಮಗಳ ಪ್ರಕಾರ, 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುವುದು ಅಥವಾ ವಹಿವಾಟು ನಡೆಸುವುದು ಕಾನೂನುಬಾಹಿರ. ಆದರೆ ಜಮೀರ್ ಅಹ್ಮದ್ ಖಾನ್ ಮೃತರ ಕುಟುಂಬಕ್ಕೆ 25 ಲಕ್ಷ ರೂ. ನಗದು ರೂಪದಲ್ಲಿಯೇ ಪರಿಹಾರವಾಗಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ನಗದು ವಹಿವಾಟಿನ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ತೇಜಸ್ ಗೌಡ ಅವರು ಐಟಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
























