ಇನ್ನೋರ್ವ ಉನ್ನತ ಪೊಲೀಸ್ ಅಧಿಕಾರಿಯ ತಲೆದಂಡ
ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಬ್ಯಾನರ್ ವಿಚಾರವಾಗಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಉನ್ನತ ಅಧಿಕಾರಿಯ ತಲೆ ದಂಡವಾಗಿದೆ.
ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ ಪೊಲೀಸ್ ಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಳ್ಳಾರಿ ವಲಯಕ್ಕೆ ನೂತನ ಐಜಿ ಆಗಿ ಹರ್ಷ ಗುಪ್ತಾ ಹಾಗೂ ನೂತನ ಎಸ್ಪಿ ಆಗಿ ಡಾ.ಸುಮನ್ ಡಿ ಪೆನ್ನೇಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಜ.1ರಂದು ಬಳ್ಳಾರಿ ಎಸ್ಪಿಯಾಗಿ ಪವನ್ ನೆಜ್ಜೂರ್ ಅಧಿಕಾರ ಸ್ವೀಕರಿಸಿದ್ದರು. ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಮರುದಿನವೇ ಅವರನ್ನು ಅಮಾನತು ಮಾಡಲಾಗಿತ್ತು. ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಜಿ-ಐಜಿಪಿ ಕಡೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಐಜಿ ವರ್ತಿಕಾ ಕಟಿಯಾರ್ ಅವರನ್ನ ಸರ್ಕಾರ ವರ್ಗಾವಣೆಗೊಳಿಸಿದೆ.
























