ಫ್ಲ್ಯಾಟ್‌ಗೆ ಬೆಂಕಿಹತ್ತಿಕೊಂಡಾಗ ಹೊರ ಬರಲಾಗದೆ ಸಾವು
ಬೆಂಗಳೂರು: ಬೆಂಕಿ ಹತ್ತಿಕೊಂಡಾಗ ಉಸಿರುಗಟ್ಟಿ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಮಣ್ಯ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ವರದಿಯಾಗಿದೆ.
ಜನವರಿ 3ರಂದು ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರ್ಮಿಳಾ (34) ಮೃತ ದುರ್ದೈವಿ. ಶರ್ಮಿಳಾ ಮೂಲತಃ ಮಂಗಳೂರಿನವರು. ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಸೇರಿದ್ದರು.
ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ರೂಮ್‌ನಲ್ಲಿ ಜ.3ರಂದು ರಾತ್ರಿ 10.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿದೆ. ಇದನ್ನು ನೋಡಿದ ಮನೆ ಮಾಲೀಕ ವಿಜಯೇಂದ್ರ ಅವರು ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶರ್ಮಿಳಾ ಮನೆ ಬಳಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಮನೆಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ರೂಮ್ ಹಾಗೂ ಹಾಲ್‌ನಲ್ಲಿ ಹೊಗೆ ತುಂಬಿಕೊಂಡಿತ್ತು. ಬೆಂಕಿ ನಂದಿಸಿದ್ದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮನೆ ಪರಿಶೀಲನೆ ವೇಳೆ ಶರ್ಮಿಳಾ ಪ್ರಜ್ಞೆ ತಪ್ಪಿ ಬಿದ್ದಿದ್ದು ಕಂಡು ಬಂದಿತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಶರ್ಮಿಳಾರನ್ನ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬೆಂಕಿ ಬಿದ್ದಿದ್ದ ಪರಿಣಾಮ ರೂಮಿನಿಂದ ಹೊರ ಬರಲಾಗದೆ ಉಸಿರುಗಟ್ಟಿ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸೆರ್ಕ್ಯೂಟ್ ಅಥವಾ ಬೆಡ್‌ಲ್ಯಾಂಪ್ ಅಥವಾ ಮೇಣದಬತ್ತಿ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯಿಂದ ರೂಮಿನಲ್ಲಿ ಬೆಡ್, ಕರ್ಟನ್ ಸೇರಿದಂತೆ ಎಲ್ಲ ವಸ್ತುಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಸೋಕೋ ಟೀಮ್, ಎಫ್‌ಎಸ್‌ಎಲ್ ತಂಡ ಭೇಟಿ ಪರಿಶೀಲನೆ ಮಾಡಿದೆ. ನಿಖರ ಕಾರಣ ತಿಳಿಯಲು ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
























