ಶಾಶ್ವತವಾದದ್ದು ಎಂದಿಗೂ ನಾಶವಾಗುವುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಸಾವಿರಾರು ವರುಷಗಳ ಐಹಿತ್ಯವುಳ್ಳ ಪ್ರಸಿದ್ಧ ಸೋಮನಾಥ ದೇಗುಲದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೇಖನವೊಂದನ್ನು ಬರೆದಿದ್ದಾರೆ.

ದೇಗುಲದ ಮೇಲೆ ಘಜ್ನಿ ದಾಳಿ ನಡೆಸಿ ಸಾವಿರ ವರ್ಷಗಳಾಗುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಶ್ರೀ ಸೋಮನಾಥ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆ ಅವರು ದೇವಾಲಯದ ಬಗ್ಗೆ ಬರೆದುಕೊಂಡಿದ್ದು, ಇದು ಕೇವಲ ಆರಾಧನಾ ಸ್ಥಳವಲ್ಲ ಬದಲಾಗಿ ಭಾರತದ ಆತ್ಮ, ನಾಗರೀಕತೆಯ ಪ್ರತೀಕ ಎಂದು ವರ್ಣಿಸಿದ್ದಾರೆ.

ಸೋಮನಾಥ ಎಂಬ ಹೆಸರು ಕೇಳಿದಾಗ ಹೃದಯದಲ್ಲಿ ಹೆಮ್ಮೆ ಮೂಡುತ್ತದೆ. ಇದು ದೇಶದ ಅಚಲ ನಂಬಿಕೆ, ಸಂಸ್ಕೃತಿ, ಶಾಶ್ವತತೆಯ ಸಂಕೇತ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೆದಲನೆಯದಾಗಿದ್ದು, ಇದರ ಆಧ್ಯಾತ್ಮಿಕ ಮಹತ್ವವನ್ನು ಧಾರ್ಮಿಕ ಶ್ಲೋಕಗಳ ಮೂಲಕ ಉಲ್ಲೇಖಿಸಿದ್ದಾರೆ.





















































 
 

ಘಜ್ನಿಯ ದಾಳಿಯನ್ನು ಕ್ರೂರತೆ ಮತ್ತು ವಿನಾಶದ ಸಂಕೇತ ಎಂಬುದಾಗಿ ಅವರು ಹೇಳಿದ್ದಾರೆ. ಈ ದಾಳಿ ದೇವಾಲಯದ ಮೇಲೆ ಮಾತ್ರವಲ್ಲ ಸಮಾಜದ ನೈತಿಕತೆಯ ಮೇಲೆಯೂ ಪ್ರಹಾರ ನಡೆಸಿತ್ತು. ಹೀಗಿದ್ದರೂ ಸೋಮನಾಥದ ಕಥೆ ವಿನಾಶದ ಕಥೆಯಲ್ಲ, ಅದು ಪುನರ್ನಿರ್ಮಾಣ, ಧೈರ್ಯದ ಪ್ರತೀಕ ಎಂದು ಬಣ್ಣಿಸಿದ್ದಾರೆ. ಪದೇ ಪದೇ ನಾಶವಾದರೂ ಪ್ರತಿ ಪೀಳಿಗೆ ಈ ದೇಗುಲವನ್ನು ಮತ್ತೆ ನಿರ್ಮಿಸಿದೆ ಎನ್ನುವುದು ಭಾರತೀಯರ ಪ್ರಬಲ ಇಚ್ಛಾಶಕ್ತಿಗೆ ಹಿಡಿದ ಕೈಗನ್ನಡಿ ಎಂದು ಸಂತಸ‌ ವ್ಯಕ್ತಪಡಿಸಿದ್ದಾರೆ.

ಸರ್ದಾರ್ ಪಟೇಲರ ನೇತೃತ್ವದಲ್ಲಿ ಸ್ವಾತಂತ್ರ್ಯದ ಬಳಿಕ ಈ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದ್ದು, 1951 ರಲ್ಲಿ ದೇವಾಲಯ ಭಕ್ತರ ದರ್ಶನಕ್ಕೆ ತೆರೆದುಕೊಂಡ ಘಟನೆ ಐತಿಹಾಸಿಕ. ಶಾಶ್ವತವಾದದ್ದು ಎಂದಿಗೂ ನಾಶವಾಗುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸೋಮನಾಥದಂತೆಯೇ ಭಾರತ ಸಹ ಪುನರುತ್ಥಾನಗೊಂಡಿದೆ. ಜಾಗತಿಕ ವೇದಿಕೆಯಲ್ಲಿ ಭಾರತ ಭರವಸೆಯ ದೇಶವಾಗಿ ಹೊರಹೊಮ್ಮುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದ ಜೊತೆಗೆ ಹೆಜ್ಜೆ ಇಡುತ್ತಿದೆ ಎಂದು ಅವರು ಅಭಿಮಾನದಿಂದ ಬರೆದುಕೊಂಡಿದ್ದಾರೆ.

error: Content is protected !!
Scroll to Top