ಓಂ ಶಕ್ತಿ ರಥಯಾತ್ರೆ ಮೇಲೆ ಕಲ್ಲು ತೂರಾಟ : ಮೂವರಿಗೆ ಗಾಯ

ರಾತ್ರಿ ರಥಯಾತ್ರೆ ನಡೆಯುತ್ತಿದ್ದಾಗ ಕಲ್ಲು ತೂರಿದ ಅನ್ಯಕೋಮಿನವರು

ಬೆಂಗಳೂರು: ದೇವಿಯ ತೇರು ಎಳೆಯುತ್ತಿರುವ ವೇಳೆ ತೇರಿನ ಮೇಲೆ ಹಾಗೂ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆದಿರುವ ಘಟನೆ ಬೆಂಗಳೂರಿನ ಜೆಜೆ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ ರಾತ್ರಿ ನಡೆದಿದ್ದು, ಇಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಮೂವರಿಗೆ ಕಲ್ಲೇಟು ಬಿದ್ದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಲ್ಲು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಮಗು, ಯುವತಿ, ವಯಸ್ಕ ಮಹಿಳೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುವಂತೆ ಬಿಗಿಪಟ್ಟು ಹಿಡಿದು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಲಾಗಿದೆ.





















































 
 

ತೇರಿನ ಮೇಲೆ ಅನ್ಯ ಕೋಮಿನವರಿಂದ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಓಂ ಶಕ್ತಿ ಮಾಲೆ ಧರಿಸಿದ್ದ ಮಗುವಿಗೆ ಕಲ್ಲೇಟು ಬಿದ್ದಿದೆ. ಘಟನೆ ಬಳಿಕ ಓಂ ಶಕ್ತಿ ಮಾಲಾಧಾರಿಗಳು ಜೆಜೆಆರ್ ನಗರ ಠಾಣೆಯ ಮುಂದೆ ಜಮಾಯಿಸಿ ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿ ಕಲ್ಲು ಎಸೆದ ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಭಾನುವಾರ ರಾತ್ರಿ 8.30 ಗಂಟೆ ಸುಮಾರಿಗೆ ವಿಎಸ್ ಗಾರ್ಡನ್​ ಬಳಿ ಮಾಲಾಧಾರಿಗಳು ಬರುತ್ತಿದ್ದಂತೆಯೇ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲೇಟು ಓಂ ಶಕ್ತಿ ಮಾಲಾಧಾರಿ ಯುವತಿಯರ ತಲೆಗೆ ಬಡಿದು ನೆತ್ತರು ಹರಿದಿದೆ. ಕಲ್ಲು ತೂರಾಟದ ಬೆನ್ನಲ್ಲೇ ಕೆರಳಿದ ಓಂ ಶಕ್ತಿ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಸ್ಟೇಷನ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಅನ್ಯ ಕೋಮಿನವರು ಕಲ್ಲೆಸೆದಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ. ಪ್ರತಿದಿನ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಸಂಸದ ಪಿ.ಸಿ ಮೋಹನ್ ಭೇಟಿ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಭಯದಿಂದ ಬದುಕುವ ಪರಿಸ್ಥಿತಿ ಇದೆ. ತೇರು ತಗೊಂಡು ಹೋಗಬಾರದಾ? ಮಾಲೆ ಹಾಕಬಾರದಾ? ಎಂದು ಅವರು ಕಿಡಿಕಾರಿದ್ದಾರೆ.

ಕಲ್ಲು ತೂರಾಟದ ಬಳಿಕ ಜೆಜೆ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಏರಿಯಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ನಿನ್ನೆ ರಾತ್ರಿಯಿಂದಲೇ 2 ಕೆಎಸ್​ಆರ್​ಪಿ ತುಕಡಿ ನಿಯೋಜಿಸಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

error: Content is protected !!
Scroll to Top