ಅಮೆರಿಕದ ಸೆರೆಯಲ್ಲಿ ವೆನೆಜುವೆಲಾ ಅಧ್ಯಕ್ಷ : ಫೋಟೊ ಬಿಡುಗಡೆ

ಇಷ್ಟಕ್ಕೂ ವೆನೆಜುವೆಲಾ ಮೇಲೆ ಅಮೆರಿಕ ದಿಢೀರ್‌ ದಾಳಿ ಮಾಡಲು ಕಾರಣ ಏನು?

ವಾಷಿಂಗ್ಟನ್: ವೆನೆಜುವೆಲಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ ಕೆಲವೇ ಗಂಟೆಗಳಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿಯಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಹೊತ್ತಿನಲ್ಲಿ ಅಮೆರಿಕದ ಯುದ್ಧನೌಕೆಯಲ್ಲಿ ನಿಕೋಲಸ್ ಮಡುರೊ ಇರುವ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ತನ್ನ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಫೊಟೊ ಬಿಡುಗಡೆ ಮಾಡಿರುವ ಟ್ರಂಪ್‌ ವೆನಿಜುವೆಲಾದ ಅಧ್ಯಕ್ಷರನ್ನು ನ್ಯೂಯಾರ್ಕ್‌ಗೆ ಕರೆದೊಯ್ಯಲಾಗುತ್ತಿದೆ, ಮಡುರೊ ಪತ್ನಿ ಯುಎಸ್‌ಎಸ್ ಐವೊ ಜಿಮಾದಲ್ಲಿದ್ದು, ಅವರೂ ನ್ಯೂಯಾರ್ಕ್‌ಗೆ ಹೋಗ್ತಿದ್ದಾರೆ ಅಂತ ತಿಳಿಸಿದ್ದಾರೆ.





















































 
 

ಟ್ರಂಪ್‌ ಬಿಡುಗಡೆ ಮಾಡಿದ ಚಿತ್ರದಲ್ಲಿ ಪದಚ್ಯುತಿಗೊಂಡ ಮಡುರೊ ಕೈಗೆ ಕೋಳ ಹಾಕಿರುವುದು ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿ ಕೂರಿಸಿರುವುದು ಕಂಡುಬಂದಿದೆ. ಕುಡಿಯುವ ನೀರಿನ ಬಾಟಲ್‌ವೊಂದನ್ನ ಕೈನಲ್ಲಿ ಹಿಡಿದುಕೊಂಡಿದ್ದಾರೆ. ಮಡುರೊ ವಿರುದ್ಧ ಮಾದಕ ದ್ರವ್ಯ, ಭಯೋತ್ಪಾದನಾ ಪಿತೂರಿ, ಕೊಕೇನ್‌ ಆಮದು ಪಿತೂರಿ, ಮಿಷಿನ್‌‌ ಗನ್‌ ಹಾಗೂ ವಿನಾಶಕಾರಿ ಸಾಧನಗಳನ್ನು ಹೊಂದಿರುವ ಪಿತೂರಿಗಳು ಸೇರಿ ಹಲವು ದೋಷಾರೋಪಗಳನ್ನು ಅಮೆರಿಕ ಹೊರಿಸಿದೆ.

2013ರಿಂದ ಸತತವಾಗಿ ವೆನೆಜುವೆಲಾದ ಅಧ್ಯಕ್ಷ ಸ್ಥಾನದಲ್ಲಿರುವ ಮಡುರೊ ಅವರ ಅಧಿಕಾರವನ್ನು ಟ್ರಂಪ್ ಆಡಳಿತ ಪ್ರಶ್ನಿಸುತ್ತಿದೆ. 2024ರಲ್ಲಿ ವೆನೆಜುವೆಲಾದಲ್ಲಿ ನಡೆದಿರುವ ಚುನಾವಣೆ ನ್ಯಾಯಯುತವಾಗಿಲ್ಲ ಎಂಬುದು ಅಮೆರಿಕದ ವಾದ. ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿ ಮಡುರೊ ಅಧಿಕಾರಕ್ಕೆ ಪದೇಪದೆ ಬರುತ್ತಿದ್ದಾರೆ ಎಂಬುದು ಅಮೆರಿಕದ ವಾದ. ಅದೇ ಕಾರಣಕ್ಕಾಗಿ, ವೆನೆಜುವಲಾದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಾ, ಹಲವಾರು ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ಒತ್ತಡಗಳನ್ನು ಹೇರುವ ಮೂಲಕ ಮಡುರೊ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಮೆರಿಕ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆ ಎಲ್ಲ ಪ್ರಯತ್ನಗಳು ವಿಫಲವಾಗಿದ್ದಕ್ಕೆ ಈಗ ನೇರವಾಗಿ ದಾಳಿ ನಡೆಸಿದೆ.

ಅಪಾರ ತೈಲ ಸಂಪತ್ತಿನ ಮೇಲೆ ಕಣ್ಣು

ಮಡುರೊ ಅವರನ್ನು “ಕಾರ್ಟೆಲ್ ಡಿ ಲಾಸ್ ಸೋಲ್ಸ್” ಎಂಬ ಮಾದಕವಸ್ತು ಕಾರ್ಟೆಲ್‌ನ ಉನ್ನತ ಮಟ್ಟದ ಸದಸ್ಯ ಎಂದು ಟ್ರಂಪ್‌ ಆರೋಪಿಸಿದ್ದರು. ಇದು ಅಮೆರಿಕಕ್ಕೆ ಮಾದಕವಸ್ತುಗಳನ್ನು ಸಾಗಿಸುತ್ತಿದೆ ಎಂದು ಅವರು ಹೇಳಿದ್ದರು. ಆದರೆ, ಇದಕ್ಕೆ ಟ್ರಂಪ್ ಯಾವುದೇ ಪುರಾವೆಗಳನ್ನು ನೀಡಿರಲಿಲ್ಲ. ಆದರೆ, ವೆನೆಜುವೆಲಾದ ವಿರುದ್ಧದ ತಮ್ಮ ಮಾರಕ ಮಿಲಿಟರಿ ಕಾರ್ಯಾಚರಣೆಗಳನ್ನು ಸಮರ್ಥಿಸಲು ಈ ಆರೋಪಗಳನ್ನು ಟ್ರಂಪ್ ಬಳಸಿಕೊಂಡಿದ್ದಾರೆ.

ವೆನೆಜುವೆಲಾದಲ್ಲಿ ಬಹಳ ಹೇರಳವಾದ ನೈಸರ್ಗಿಕ ಸಂಪತ್ತು ಇದೆ. ವೆನೆಜುವೆಲಾ ತೈಲ ಮತ್ತು ಅಪರೂಪದ ಖನಿಜಗಳಿಂದ ಸಮೃದ್ಧವಾಗಿದೆ. ಇದು ಅತ್ಯಂತ ಅಮೂಲ್ಯವಾದ ಸರಕುಗಳಾಗಿ ಕಾರ್ಯನಿರ್ವಹಿಸುತ್ತದೆ. ಮಡುರೊ ಪ್ರಕಾರ, ದಕ್ಷಿಣ ಅಮೆರಿಕಾದ ದೇಶವಾದ ವೆನೆಜುವೆಲಾ 1.36 ಟ್ರಿಲಿಯನ್ ಡಾಲರ್ ಮೌಲ್ಯದ ಖನಿಜ ಸಂಪತ್ತನ್ನು ಹೊಂದಿದೆ. ಡಿಸೆಂಬರ್‌ನಲ್ಲಿ ಅಮೆರಿಕ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ನಂತರ, ಕ್ಯಾರಕಾಸ್ ತನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಅಮೆರಿಕ ವೆನೆಜುವೆಲಾವನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ನೇರವಾಗಿ ಆರೋಪಿಸಿತ್ತು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ಕಳೆದ ತಿಂಗಳು ವೆನೆಜುವೆಲಾದ ಕರಾವಳಿಯಲ್ಲಿ ವಶಪಡಿಸಿಕೊಂಡ ತೈಲ ಟ್ಯಾಂಕರ್ ಇರಾನ್‌ಗೆ ತೈಲವನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ವೆನೆಜುವೆಲಾ ಈ ಆರೋಪವನ್ನು ನಿರಾಕರಿಸಿದೆ. ಡೊನಾಲ್ಡ್ ಟ್ರಂಪ್ ಅವರ ಈ ಕ್ರಮಗಳನ್ನು “ಅಂತಾರಾಷ್ಟ್ರೀಯ ಕಡಲ್ಗಳ್ಳತನದ ಕೃತ್ಯ” ಎಂದು ವೆನೆಜುವೆಲಾ ಟೀಕಿಸಿತ್ತು. ಈ ದಾಳಿಗೆ ಎರಡನೆಯದಾಗಿ ಹೇಳಲಾಗುತ್ತಿರುವ ಕಾರಣವೆಂದರೆ ಮಾದಕ ವಸ್ತುಗಳು. ವೆನೆಜುವೆಲಾ ಕೊಕೇನ್‌ಗೆ ಪ್ರಮುಖ ಸಾಗಣೆ ಮಾರ್ಗವಾಗಿದೆ.

ಅಮೆರಿಕಕ್ಕಿಂತ 5 ಪಟ್ಟು ಹೆಚ್ಚು ತೈಲ ನಿಕ್ಷೇಪಗಳಿದ್ದರೂ ವೆನೆಜುವೆಲಾ ಯಾಕೆ ಶ್ರೀಮಂತ ದೇಶವಾಗಿಲ್ಲ ಎಂಬ ಪ್ರಶ್ನೆ ಕಾಡುವುದು ಸಹಜ. ವೆನೆಜುವೆಲಾದಲ್ಲಿ ಭಾರಿ ತೈಲ ನಿಕ್ಷೇಪಗಳಿದ್ದರೂ ಅದರ ಹೆಚ್ಚಿನ ತೈಲವು ಪೂರ್ವ ಪ್ರದೇಶದ ಒರಿನೊಕೊ ಬೆಲ್ಟ್‌ನಲ್ಲಿ ಕಂಡುಬರುತ್ತದೆ. ಸಮಸ್ಯೆಯೆಂದರೆ ಅದು ಭಾರಿ ಕಚ್ಚಾ ತೈಲವಾಗಿದೆ. ಈ ತೈಲವು ಜೇನುತುಪ್ಪದಂತೆ ಅತ್ಯಂತ ದಪ್ಪವಾಗಿರುತ್ತದೆ.

ಈ ರೀತಿಯ ತೈಲವನ್ನು ಹೊರತೆಗೆಯುವುದು ಮತ್ತು ಸಂಸ್ಕರಿಸುವುದು ಸಾಂಪ್ರದಾಯಿಕ ತೈಲಕ್ಕಿಂತ ಹೆಚ್ಚು ಕಷ್ಟಕರ ಮತ್ತು ದುಬಾರಿಯಾಗಿದೆ. ಇದರಲ್ಲಿ ಹೆಚ್ಚಿನ ಸಲ್ಫರ್ ಅಂಶವಿದ್ದು, ಅದನ್ನು ತೆಗೆದು ಹಾಕಲು ಸುಧಾರಿತ ತಂತ್ರಜ್ಞಾನ ಮತ್ತು ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಈ ತೈಲವು ಹೆಚ್ಚು ದಪ್ಪವಾಗಿರುವುದರಿಂದ ಮತ್ತು ಸಂಸ್ಕರಿಸಲು ಹೆಚ್ಚು ಕಷ್ಟಕರವಾಗಿರುವುದರಿಂದ, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತರ ದೇಶಗಳ ಕಚ್ಚಾ ತೈಲಕ್ಕಿಂತ ಗಮನಾರ್ಹವಾಗಿ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಇದರರ್ಥ ಹೆಚ್ಚಿನ ಶ್ರಮ ಮತ್ತು ಕಡಿಮೆ ಲಾಭ. ಇದೇ ಕಾರಣಕ್ಕೆ ವೆನೆಜುವೆಲಾ ಬಡ ರಾಷ್ಟ್ರವಾಗಿಯೇ ಮುಂದುವರಿದಿದೆ. ಈ ತೈಲ ನಿಕ್ಷೇಪಗಳನ್ನು ದೋಚಲು ಅಮೆರಿಕ ಪ್ಲಾನ್ ಮಾಡಿದೆ.

error: Content is protected !!
Scroll to Top