ಬ್ಯಾನರ್‌ ಗಲಾಟೆ : ಶಾಸಕ ಭರತ್‌ ರೆಡ್ಡಿ ಸಹಿತ ಹಲವರ ವಿರುದ್ಧ ಕೇಸ್‌

ಬ್ಯಾನರ್‌ ಕಟ್ಟುವ ಗಲಾಟೆಯಲ್ಲಿ ಗುಂಡೇಟಿಗೆ ಯುವಕ ಬಲಿಯಾದ ಪ್ರಕರಣ

ಬಳ್ಳಾರಿ : ಬಳ್ಳಾರಿ ಬ್ಯಾನರ್​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿ ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್​​​ಐಆರ್​​ ದಾಖಲು ಮಾಡಲಾಗಿದೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​​​ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ, ಚಾನಾಳ್ ಶೇಖರ್​​, ನಾರಾ ಪ್ರತಾಪ್ ರೆಡ್ಡಿ, ನಾರಾ ಸೂರ್ಯನಾರಾಯಣರೆಡ್ಡಿ ಸೇರಿ ಹಲವರ ಹೆಸರನ್ನು ಎಫ್​​​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಜನಾರ್ದನ ರೆಡ್ಡಿ, ಬಿಜೆಪಿ ಕಾರ್ಯಕರ್ತ ನಾಗರಾಜ್ ನೀಡಿದ್ದ ದೂರಿನ ಆಧಾರದ ಮೇಲೆ ಎಫ್​​​ಐಆರ್​​ ದಾಖಲು ಮಾಡಲಾಗಿದೆ.

ನಿನ್ನೆ ಸಂಜೆ ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ದೂರು ನೀಡಲಾಗಿತ್ತು. ಶಾಸಕ ಜನಾರ್ದನ ರೆಡ್ಡಿ ಹಲ್ಲೆ, ಕೊಲೆ ಯತ್ನ ಆರೋಪದಡಿ ದೂರು ನೀಡಿದರು. ಮತ್ತೊಂದಡೆ ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪದಡಿ ಬಿಜೆಪಿ ಕಾರ್ಯಕರ್ತ ನಾಗರಾಜ್ ಕೂಡ ನೀಡಿದರು. ಈ ದೂರು ನೀಡುವಾಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಇದ್ದರು. ಎಎಸ್​​​ಪಿ ರವಿಕುಮಾರ್ ದೂರ ಸ್ವೀಕರಿಸಿದ್ದು, ಎಫ್​​​ಐಆರ್​​ ದಾಖಲು ಮಾಡಿಕೊಂಡಿದ್ದಾರೆ.





















































 
 

ಈ ಗಲಾಟೆಯಿಂದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಇಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ. ಇದರ ಜತೆಗೆ ಬಿಜೆಪಿ ನಾಯಕರಿಗೆ ಹೈಕಮಾಂಡ್​​​ನಿಂದ ಮಹತ್ವದ ಸೂಚನೆಯನ್ನು ಕೂಡ ನೀಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದ್ದಾರೆ. ಇಂದು ಬಳ್ಳಾರಿಗೆ ಬಿಜೆಪಿ ನಾಯಕರ ನಿಯೋಗ ಭೇಟಿ ಸಾಧ್ಯತೆ ಎಂದು ಹೇಳಲಾಗಿದೆ.

ಅಧಿಕಾರ ಸ್ವೀಕರಿಸಿದ ಮರುದಿನವೇ ಎಸ್‌ಪಿ ಅಮಾನತು

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್‌ಪಿ (Ballari SP) ತಲೆದಂಡವಾಗಿದೆ. ಜ.1ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಅಧಿಕಾರ ಸ್ವೀಕರಿಸಿದ್ದರು. ಬ್ಯಾನರ್‌ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಮರುದಿನವೇ ಅವರನ್ನು ಅಮಾನತು ಮಾಡಲಾಗಿದೆ.

ಬಳ್ಳಾರಿ ರೇಂಜ್ ಡಿಐಜಿ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡಿದ್ದರು. ಇನ್ನೊಂದು ಕಡೆ ಡಿಜಿ ಆಂಡ್ ಐಜಿಪಿ ಕಡೆಯಿಂದ ಸರ್ಕಾರಕ್ಕೆ ಅಮಾನತುಗೊಳಿಸುವಂತೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

error: Content is protected !!
Scroll to Top