ಬಿಜೆಪಿ ಕೆಂಡಾಮಂಡಲ; ಕಾಂಗ್ರೆಸ್ಗೆ ಗಂಟಲಿನ ಬಿಸಿತುಪ್ಪವಾದ ವಿವಾದ
ಬೆಂಗಳೂರು: ನಗರದ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಕೇರಳದ ಬಳಿಕ ಪಾಕಿಸ್ತಾನವೂ ಮೂಗುತೂರಿಸಿರುವುದು ವಿವಾದವನ್ನು ಇನ್ನಷ್ಟು ತೀವ್ರಗೊಳಿಸಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ಮುಗಿಬಿದ್ದಿದ್ದು, ಕಾಂಗ್ರೆಸ್ ಸರ್ಕಾರ ಒಡೆದು ಆಳುವ ತುಷ್ಟೀಕರಣ ರಾಜಕಾರಣ ಮಾಡುತ್ತಿರುವುದರಿಂದ ಆಡಳಿತ ಹಳ್ಳಹಿಡಿದಿದೆ ಎಂದು ಆರೋಪಿಸಿದೆ.
ಅಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲಿಮರ ಸುಮಾರು 200 ಮನೆಗಳನ್ನು ನೆಲಸಮ ಮಾಡಿದ್ದಕ್ಕೆ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಇಲಾಖೆ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳ ತೀವ್ರ ಕಳವಳದ ವಿಷಯವಾಗಿದೆ. ಅಲ್ಲಿ ಕ್ರಿಸ್ಮಸ್ ಆಚರಣೆ ವೇಳೆ ದಾಳಿಗಳು ಆಗಿವೆ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಹಾಗೂ ಮುಸ್ಲಿಮರ ಗುಂಪು ಹತ್ಯೆ ನಡೆದಿವೆ ಎಂದು ಆರೋಪಿಸಿದೆ.
ಬೆಂಗಳೂರು ಘಟನೆಯನ್ನು ಪಾಕಿಸ್ತಾನ ನೇರವಾಗಿ ಪ್ರಸ್ತಾಪಿಸದೆ ಇದ್ದರೂ ರಾಷ್ಟ್ರಮಟ್ಟದಲ್ಲಿ ಕೋಗಿಲು ಬಡಾವಣೆಯ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ಗಮನ ಸೆಳೆದಿರುವುದರಿಂದ ಇದೇ ಘಟನೆಯನ್ನು ಪಾಕಿಸ್ತಾನ ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಭಾರತದೊಳಗೆ ಕಾನೂನುಬದ್ಧ ಆಡಳಿತಾತ್ಮಕ ಕ್ರಮವನ್ನು ಪಾಕಿಸ್ತಾನ ಪ್ರಶ್ನಿಸುವುದರೊಂದಿಗೆ ಈ ವಿವಾದವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಮತ್ತು ಕೋಮು ವಿಷಯವನ್ನಾಗಿ ರೂಪಿಸಲಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮನೆ ಕಳೆದುಕೊಂಡವರಿಗೆ ತಲಾ ರೂ.11 ಲಕ್ಷ ಅಂದಾಜು ವೆಚ್ಚದಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು, ಸುಮಾರು 100 ಕೋಟಿ ವೆಚ್ಚದಲ್ಲಿ ಪುನರ್ ವ್ಯವಸ್ಥೆ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕಾಗಿ ರಾಜ್ಯದಾದ್ಯಂತ ಹಲವು ವರ್ಷಗಳಿಂದ ಜನ ಕಾಯುತ್ತಿರುವಾಗ ಎರಡೇ ದಿನಕ್ಕೆ ಕೋಗಿಲು ಸಂತ್ರಸ್ತರಿಗೆ ಪರಿಹಾರ ಘೋಷಿಸಿರುವುದು ಕಾಂಗ್ರೆಸ್ ಸರ್ಕಾರದ ಒಂದು ನಿರ್ದಿಷ್ಠ ಸಮುದಾಯದ ಓಲೈಕೆ ರಾಜಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಬಾರುಕೋಲು ಯಾರ ಬಳಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಯಾರ ಸರ್ಕಾರ ನಡೆಯುತ್ತಿದೆ? ಯಾರಿಗಾಗಿ ಸರ್ಕಾರ ನಡೆಯುತ್ತಿದೆ? ಇದು ನಮ್ಮ ಪ್ರಶ್ನೆ. ರಾಜ್ಯ ಸರ್ಕಾರದ ಬಾರುಕೋಲು ಯಾರ ಬಳಿ ಇದೆ? ಕೆ.ಸಿ.ವೇಣುಗೋಪಾಲ್ ರಾಜ್ಯ ಸರ್ಕಾರದ ಅಧಿಕಾರದಲ್ಲಿ ಮೂಗು ತೂರಿಸುತ್ತಾರೆ. ಅವರದ್ದೇ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಲ್ಲಿ ನಿರ್ದೇಶನ ಮಾಡುತ್ತಾರೆ. ಸಿದ್ಧರಾಮಯ್ಯ ಹಾಗೂ ಡಿಕೆಶಿಗೆ ಸರ್ಕಾರ ನಡೆಸಲು ಹಕ್ಕು ಇದೆಯೇ? ಕರ್ನಾಟಕದಲ್ಲಿ ಸರ್ಕಾರ ಏನು ಮಾಡುತ್ತಿದೆ? ಯುಡಿಎಫ್ ಹಾಗೂ ಎಲ್ಡಿಎಫ್ ನಮ್ಮ ರಾಜ್ಯದಲ್ಲಿ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯಿಂದ ಮನೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಇರುವ ಕೇರಳದ ಕೆ.ಸಿ.ವೇಣುಗೋಪಾಲ್ ಒತ್ತಡಕ್ಕೆ ಮಣಿದು ಕೆಲಸ ಸರ್ಕಾರ ಮಾಡುತ್ತಿದೆ. ಕನ್ನಡಿಗರಿಗೆ ಸಿಗಬೇಕಿದ್ದ ಮನೆಗಳು ಅಕ್ರಮ ವಲಸಿಗರ ಪಾಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
























