ತೀರಾ ಖಾಸಗಿಯಾಗಿ ನಡೆದ ಕಾರ್ಯಕ್ರಮ; ಕೆಲವೇ ಗಣ್ಯರು ಭಾಗಿ
ರಾವಲ್ಪಿಂಡಿ: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಕೆಲ ದಿನಗಳ ತನ್ನ ಮಗಳ ವಿವಾಹ ನೆರವೇರಿಸಿದ್ದಾರೆ. ತನ್ನ ಸ್ವಂತ ತಮ್ಮನ ಮಗ ಖಾಸಿಮ್ ಮುನೀರ್ಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾರೆ.
ಡಿಸೆಂಬರ್ 26ರಂದು ರಾವಲ್ಪಿಂಡಿಯಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿದೆ. ಮುನೀರ್ ತನ್ನ ಮೂರನೇ ಮಗಳನ್ನು ತನ್ನ ಸಹೋದರನ ಮಗ ಕ್ಯಾಪ್ಟನ್ ಅಬ್ದುಲ್ ರೆಹ್ಮಾನ್ಗೆ ಕೊಟ್ಟು ವಿವಾಹ ಮಾಡಿಸಿದ್ದಾರೆ. ಹಿಂದೆ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಅಬ್ದುಲ್ ರಹ್ಮಾನ್ ನಂತರ ನಾಗರಿಕ ಸೇವೆಗಳಿಗೆ ಸೇರ್ಪಡೆಗೊಂಡು, ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದಡಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವಿವಾಹವನ್ನು ದೊಡ್ಡ ಹೋಟೆಲ್ ಅಥವಾ ಮದುವೆ ಮಂಟಪದಲ್ಲಿ ಆಯೋಜಿಸದೆ, ರಾವಲ್ಪಿಂಡಿಯಲ್ಲಿ ಇರುವ ಅಸಿಮ್ ಮುನೀರ್ ನಿವಾಸದಲ್ಲೇ ನಡೆಸಲಾಗಿದೆ. ಏಕೆಂದರೆ ಮುನೀರ್ ನಿವಾಸವು ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಜಿಎಚ್ಕ್ಯೂ ಸಮೀಪದಲ್ಲಿದೆ. ಜೊತೆಗೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಖಾಸಗಿ ಎಂದು ಘೋಷಿಸಲಾಗಿದ್ದು, ಯಾವುದೇ ಅಧಿಕೃತ ಚಿತ್ರಗಳು ಅಥವಾ ವೀಡಿಯೊಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ.
ಈ ವಿವಾಹಕ್ಕೆ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಶಹಬಾಜ್ ಷರೀಫ್, ಉಪಪ್ರಧಾನಿ ಇಶಾಕ್ ದಾರ್, ಐಎಸ್ಐ ಮುಖ್ಯಸ್ಥ ಸೇರಿದಂತೆ ಹಲವು ಉನ್ನತ ಸೇನಾ ಜನರಲ್ಗಳು ಭಾಗವಹಿಸಿದ್ದರು ಎನ್ನಲಾಗಿದೆ.
























