ಜನನಿಬಿಢ ರೈಲು ನಿಲ್ದಾಣದ ಹೊರಗೆ ಸಂಭವಿಸಿದ ಭೀಕರ ಅಪಘಾತ
ಮುಂಬೈ: ಮುಂಬೈ ಉಪನಗರ ಭಾಂಡೂಪ್ನ ರೈಲು ನಿಲ್ದಾಣದ ಹೊರಗೆ ಬೆಸ್ಟ್ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿ 9 ಮಂದಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ರಾತ್ರಿ ಸಂಭವಿಸಿದೆ. ಜನನಿಬಿಢ ಭಾಂಡೂಪ್ ಸ್ಟೇಷನ್ ರಸ್ತೆಯಲ್ಲಿ ಬೆಸ್ಟ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಜನರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಜನದಟ್ಟಣೆಯ ಪ್ರದೇಶದಲ್ಲಿ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ.
ವೇಗವಾಗಿ ರಿವರ್ಸ್ ತೆಗೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್ ಒಂದು ವಿದ್ಯುತ್ ಕಂಬಕ್ಕೂ ಗುದ್ದಿದ್ದು, ಅದು ಮುರಿದು ಬಿದ್ದ ಪರಿಣಾಮ ಪರಿಸರದಲ್ಲಿ ಆತಂಕ ಎದುರಾಗಿತ್ತು. ಕೂಡಲೇ ಅಗ್ನಿಶಾಮಕ ದಳದವರು ಧಾವಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬಸ್ ಜನರ ತಲೆಯ ಮೇಲೇಯೇ ಹರಿದು ಹೋಗಿದ್ದು, ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಫುಟ್ಪಾತ್ ಅತಿಕ್ರಮಣವಾಗಿರುವುದರಿಂದ ಜನರು ಅನಿವಾರ್ಯವಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಹೀಗಾಗಿ ಅವರ ಮೇಲೆ ರಿವರ್ಸ್ ತೆಗೆಯುತ್ತಿದ್ದ ಬಸ್ ಹರಿದು ಹೋಗಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ5 ಲ.ರೂ. ಪರಿಹಾರ ಮತ್ತು ಗಾಯಾಳುಗಳ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಬೆಸ್ಟ್ ಮುಂಬೈ ಮಹಾನಾಗರಪಾಲಿಕೆಯ ಸಾರಿಗೆ ವಿಭಾಗವಾಗಿದೆ. ಇಡೀ ನಗರದಲ್ಲಿ ಬೆಸ್ಟ್ ಬಸ್ಗಳು ಮಾತ್ರ ಓಡಾಡುತ್ತವೆ.
























