ಕಡಬ : ಬಾರ್‌ ಮಾಲೀಕನಿಗೆ 6.5 ಲ.ರೂ. ವಂಚಿಸಿ ಮ್ಯಾನೇಜರ್‌ ಪಲಾಯನ

ಕಡಬ : ಬಾರ್ ಸಿಬ್ಬಂದಿಯೋರ್ವ ವ್ಯವಹಾರದಲ್ಲಿ ವಂಚಿಸಿ ಪರಾರಿಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ (25) ಎಂಬವರು ಠಾಣೆಗೆ ದೂರು ನೀಡಿದ್ದಾರೆ.

ಸ್ಟೀಫನ್ ಅವರ ತಾಯಿ ನೆಟ್ಟಣ ಎಂಬಲ್ಲಿ ಬಾರ್ ಹೊಂದಿದ್ದು, ಬಾರ್‌ನಲ್ಲಿ ಕಡಬದ ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂಬಾತ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನೇ ನಿತ್ಯದ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದ. ಡಿ.21ರಂದು ಸ್ಟೀಫನ್ ಬಾರಿನ ವಹಿವಾಟು ಬಗ್ಗೆ ಪರಿಶೀಲಿಸಿದಾಗ ವ್ಯತ್ಯಯ ಕಂಡುಬಂದಿದ್ದು, ಈ ಬಗ್ಗೆ ಹರ್ಷಿತ್ ಬಳಿ ವಿಚಾರಿಸಿದಾಗ ಮರುದಿನ ಸರಿಯಾಗಲಿದೆ. ವ್ಯಾಪಾರದ ನಗದನ್ನು ಮರುದಿನವೇ ಬ್ಯಾಂಕಿನಲ್ಲಿ ಜಮೆ‌ ಮಾಡುವುದಾಗಿ ತಿಳಿಸಿದ್ದ.

ಆದರೆ ಮರುದಿನ ಹಣ ಜಮೆಯಾಗದಿರುವ ಹಿನ್ನೆಲೆಯಲ್ಲಿ ಆತನ ಬಳಿ ವಿಚಾರಿಸಲು ಆತ ವಾಸ್ತವ್ಯವಿದ್ದ ಕೊಠಡಿಗೆ ಹೋದಾಗ ಆತನು ನಾಪತ್ತೆಯಾಗಿದ್ದು ಬೆಳಕಿಗೆ ಬಂದಿತು. ಈ ಬಗ್ಗೆ ಸಂಶಯಗೊಂಡು ಪರಿಶೀಲಿಸಿದಾಗ ಸ್ಟಾಕ್ ರೂಮಿನಲ್ಲಿದ್ದ ಸುಮಾರು ರೂ.6,57,104 ಮೌಲ್ಯದ ಮದ್ಯವನ್ನು ಈ ಮೊದಲೇ ಆರೋಪಿ ಮಾರಿ, ಆ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಡಿ.21ರಂದು ವ್ಯಾಪಾರದ ನಗದನ್ನು ಕಳವು ಮಾಡಿ ಪರಾರಿಯಾಗಿರುವುದು ಕಂಡುಬಂದಿದೆ‌. ಕಡಬ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.





















































 
 
error: Content is protected !!
Scroll to Top