ಖ್ಯಾತ ಸಾಹಿತಿ ಸರಿತಾ ಜ್ಞಾನಾನಂದ ನಿಧನ

50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದ ಲೇಖಕಿ

ಬೆಂಗಳೂರು: ಕನ್ನಡ ಕವಯತ್ರಿ, ಲೇಖಕಿ ಸರಿತಾ ಜ್ಞಾನಾನಂದ (82) ಶುಕ್ರವಾರ ಆರ್‌.ಆರ್‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನುವಾದಕಿಯಾಗಿ ಪ್ರಸಿದ್ಧರಾಗಿದ್ದ ಸರಿತಾ ಅವರು ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.

ಸರಿತಾ ಜ್ಞಾನಾನಂದ ಮೂಲತಃ ಬೆಂಗಳೂರಿನವರು. ಜನವರಿ 21, 1943ರಲ್ಲಿ ಜನಿಸಿದ ಅವರು ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಬಿ.ಎಡ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್. ಪದವಿಗಳನ್ನು ಪಡೆದಿದ್ದರು. ಹಿಂದಿಯಲ್ಲಿ ರಾಷ್ಟ್ರಭಾಷಾ ಪ್ರವೀಣರಾಗಿರುವುದಲ್ಲದೆ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮರಾಠಿ, ಮಲಯಾಳಂ ಮತ್ತು ಸಂಸ್ಕೃತ ಭಾಷೆಗಳಲ್ಲಿಯೂ ಪ್ರಾವೀಣ್ಯ ಸಾಧಿಸಿದ್ದರು. ಸರಿತಾ ಅವರು ಬೆಂಗಳೂರು ಮತ್ತು ಕೆಜಿಎಫ್‍ಗಳಲ್ಲಿ ಶಾಲಾ ಶಿಕ್ಷಕರಾಗಿ ಕಾರ‍್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು.





















































 
 

ಸುಮಾರು ಮುನ್ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಸರಿತಾ ಬರೆದಿದ್ದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿರುವುದಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಅನುವಾದಗೊಂಡಿದ್ದವು. ‘ಬೃಂದಾವನ’, ಹಾಗೂ ‘ತುಳಸೀ ಕಟ್ಟೆ’ ಎಂಬ ಎರಡು ಕಥಾಸಂಕಲನಗಳೂ ಪ್ರಕಟಗೊಂಡಿವೆ. ಇವರ ಹಲವಾರು ಕತೆಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ.

ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣೆಯ ಭಾರತ-ಭಾರತಿ ಪುಸ್ತಕ ಮಾಲೆಗಾಗಿ, ಮೀರಾಬಾಯಿ, ಅಶ್ವಘೋಷ, ಗಡಿಯಾರ, ಮಿದುಳು, ಕಣ್ಣು ಮುಂತಾದ ಹಲವಾರು ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಸಂಪಾದಿತ ಕೃತಿಗಳಲ್ಲಿ ಶರಭಾಂಕಲಿಂಗ ಶತಕಮು, ಡಾ.ಬಾ.ರಾ.ಗೋಪಾಲ್ ಅವರ ಕನ್ನಡ ಲೇಖನಗಳು, ಆಚಾರ‍್ಯ ಶ್ರೀ, ಆಚಾರ‍್ಯಾಭಿವಂದನೆ, ಜಕ್ಕಣಾಚಾರ‍್ಯ ಮುಂತಾದವು ಪ್ರಮುಖವಾದವುಗಳು.

ಯಂಡಮೂರಿ ವೀರೇಂದ್ರನಾಥ್, ಸೂರ‍್ಯದೇವರ ರಾಮಮೋಹನರಾವ್, ಡಾ.ಕೊಂಡೂರು ವೀರರಾಘವಾಚಾರ್ಯಲು, ಬಲಿವಾಡ ಕಾಂತರಾವ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ, ಡಾ.ಸಮರಂ ಮುಂತಾದ ತೆಲುಗು ಲೇಖಕರು, ತಮಿಳಿನ ಶಿವಶಂಕರಿ, ನಾರಾಯಣದತ್ತ ಶ್ರೀಮಾಲಿಯವರ ಹಿಂದಿ, ರಾಮ ಮೊಹಮದ್ ಡಿಸೌಜರವರ ಉರ್ದು ಮತ್ತು ಮರಾಠಿ ಭಾಷೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಂಗೀತದಲ್ಲಿ ಕೂಡ ಸಾಧನೆ ಮಾಡಿರುವ ಸರಿತಾ ಜ್ಞಾನಾನಂದರು ‘ನೀಗಿಕೊಂಡ ಸಂಸ’, ‘ಜುಂನಾಳ ‘ಧೂಳ್ಯನ ಪ್ರಸಂಗ’, ‘ಸಂಗ್ಯಾ ಬಾಳ್ಯ’, ‘ಜೋಕುಮಾರ ಸ್ವಾಮಿ’ ‘ಸಖೀಗೀತ’, ಬೆನಕನ ಕೆರೆ’ ಮುಂತಾದ ಅನೇಕ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ನೃತ್ಯಗಳಲ್ಲಿ ತರಬೇತಿ ನೀಡಿದ್ದಾರೆ. ತಮ್ಮ ಸಂಗೀತದಲ್ಲಿ ಅನೇಕ ಧ್ವನಿಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ.

error: Content is protected !!
Scroll to Top