ದೀರ್ಘ ಪ್ರಯಾಣದ ದರ ಪೈಸೆಗಳ ಲೆಕ್ಕದಲ್ಲಿ ಏರಿಕೆ
ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆ ಪ್ರಯಾಣ ದರ ತುಸು ಏರಿಕೆ ಮಾಡಲಾಗಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ಗೆ 10 ರೂ. ಹೆಚ್ಚಳ ಮಾಡಲಾಗಿದೆ.
ಡಿಸೆಂಬರ್ 21 ರಂದು ಸಚಿವಾಲಯವು ಪ್ರಯಾಣಿಕರ ದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ಇದು ಡಿಸೆಂಬರ್ 26ರಿಂದ ಜಾರಿಗೆ ಬರಲಿದೆ. ಈ ವರ್ಷ ರೈಲು ದರದಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಹಿಂದಿನ ಹೆಚ್ಚಳ ಜುಲೈನಲ್ಲಿ ಆಗಿತ್ತು.
215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕಾಗಿ, ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಒಂದು ಪೈಸೆ, ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಎಸಿ ಅಲ್ಲದ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಎರಡು ಪೈಸೆ ಮತ್ತು ಎಲ್ಲ ರೈಲುಗಳ ಎಸಿ ವರ್ಗದ ದರವನ್ನು ಹೆಚ್ಚಿಸಲಾಗಿದೆ. ಡಿಸೆಂಬರ್ 26ರ ಮೊದಲು ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ಬದಲಾವಣೆ ಅನ್ವಯಿಸುವುದಿಲ್ಲ.
215 ಕಿಲೋಮೀಟರ್ ದೂರದವರೆಗಿನ ಸಾಮಾನ್ಯ ದರ್ಜೆಯ ಟಿಕೆಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ 215 ಕಿಮೀಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಮೀಗೆ 1 ಪೈಸೆ ವೆಚ್ಚವಾಗುತ್ತದೆ. ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‌ಗಳಿಗೆ, ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳವಾಗಲಿದೆ. ಹವಾನಿಯಂತ್ರಿತ ಕೋಚ್‌ಗಳಲ್ಲಿ ಪ್ರಯಾಣದ ವೆಚ್ಚವನ್ನು ಸಹ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಿಸಲಾಗಿದೆ.
ಹೊಸ ದರಗಳು ಜಾರಿಗೆ ಬಂದ ನಂತರ ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚಾಗಲಿದೆ. ಇದರಿಂದ ಪ್ರಯಾಣಿಕರಿಗೆ ದೊಡ್ಡ ಹೊರೆಯೇನೂ ಬೀಳುವುದಿಲ್ಲ.
ತೇಜಸ್ ರಾಜಧಾನಿ, ರಾಜಧಾನಿ, ಶತಾಬ್ದಿ, ಡುರಂಟೋ, ವಂದೇ ಭಾರತ್, ಹಮ್‌ಸಫರ್, ಅಮೃತ್ ಭಾರತ್, ತೇಜಸ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನಶತಾಬ್ದಿ, ಯುವ ಎಕ್ಸ್‌ಪ್ರೆಸ್, ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಪ್ರಮುಖ ರೈಲುಗಳ ದರ ಬದಲಾಗಲಿದೆ.
ಕಳೆದ ದಶಕದಲ್ಲಿ ರೈಲ್ವೆ ತನ್ನ ಜಾಲ ಮತ್ತು ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ ಮತ್ತು ತನ್ನ ಮಾನವ ಶಕ್ತಿಯನ್ನು ಹೆಚ್ಚಿಸುತ್ತಿದೆ ಈ ಹಿನ್ನೆಯಲ್ಲಿ ಇತ್ತೀಚಿನ ಪ್ರಯಾಣ ದರ ಹೆಚ್ಚಳ ಮಾಡಿದ್ದು ರೈಲ್ವೆಯ ಆದಾಯವನ್ನು ವಾರ್ಷಿಕವಾಗಿ 600 ಕೋಟಿ ರೂ.ಗಳಷ್ಟು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.
























