ಪುತ್ತೂರು: ಭರವಸೆಯ ಶಿಕ್ಷಣ ಸಂಸ್ಥೆಯಾದ ಇಲ್ಲಿನ ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಪೋಷಕರ ದಿನಾಚರಣೆಯನ್ನು ಆಚರಿಸಲಾಯಿತು.
ದಿಕ್ಸೂಚಿ ಭಾಷಣ
ಸುಳ್ಯದ ಎಂ.ಬಿ. ಫೌಂಡೇಷನ್’ನ ಅಧ್ಯಕ್ಷರಾದ ಪೂರ್ವ ಲಯನ್ಸ್ ಗವರ್ನರ್ ಲಯನ್ ಎಂ.ಬಿ. ಸದಾಶಿವ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಭಾರತೀಯ ಮೌಲ್ಯಗಳನ್ನು ನೈಜತೆಯೊಂದಿಗೆ ಅನುಷ್ಠಾನಿಸುತ್ತಿದೆ ಎಂದು ಹೇಳಿದರು. ಮನಃಪರಿವರ್ತನೆಯ ಮೂಲಕ ಸಾಮಾಜಿಕ ಪರಿವರ್ತನೆ ಆಗಬೇಕಿದೆ ಮತ್ತು ಅದು ಈ ಶಾಲೆಯಲ್ಲಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಮಕ್ಕಳನ್ನು ಸ್ವತಂತ್ರರಾಗಿರುವಂತೆ ಪ್ರೇರೇಪಿಸಬೇಕು. ಅದಕ್ಕಾಗಿ ಪೋಷಕರು ಅವರ ನೈಮಿತ್ತಿಕ ಕೆಲಸಗಳನ್ನು ಅವರೇ ಮಾಡುವಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು. ಹಿರಿಯರ ವರ್ತನೆಯೇ ಕಿರಿಯರಿಗೆ ಮಾರ್ಗದರ್ಶನವಾಗುವಂತ ವಾತಾವರಣವನ್ನು ನಾವು ನಿರ್ಮಿಸಿಕೊಡಬೇಕು ಎಂದು ಅವರು ವಿಶ್ಲೇಷಿಸಿದರು.

ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಮನೋಹರ್ ರೈ ಮೇಲ್ಮಜಲು ಶುಭ ಹಾರೈಸಿದರು.
ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಪೋಷಕರ ಪಾತ್ರದ ಕುರಿತಾದ ದಿಕ್ಸೂಚಿ ಭಾಷಣಕಾರರ ಮಾತಿಗೆ ಪೂರಕವಾಗಿ ಮಾತನಾಡಿ ಬದುಕಿರಿ ಮತ್ತು ಬದುಕಲು ಬಿಡಿ ಎಂಬ ಸಂದೇಶವನ್ನು ಉಲ್ಲೇಖಿಸಿದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್’ನ ಸ್ವಸಹಾಯ ಸಂಘದ ಪ್ರೇರಕಿ ಸುಮಲತಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಹರ್ಷಿತಾ ಪ್ರಾರ್ಥನೆ, ಪೋಷಕರ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾಶ್ರೀ ಹೆಗ್ಡೆ ಸ್ವಾಗತ, ಶ್ರೀಮತಿ ಅನುಪಮಾ ಅತಿಥಿಗಳ ಪರಿಚಯ ಮತ್ತು ಶಾಲಾ ನಿರ್ದೇಶಕಿ ಶ್ರೀಮತಿ ಪ್ರತಿಭಾದೇವಿ ನಾರಾಯಣ ಧನ್ಯವಾದ ಸಮರ್ಪಣೆಗಳ ಜವಾಬ್ದಾರಿಗಳನ್ನು ನಿರ್ವಹಿಸಿದರು. ಶಾಲಾಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಮಳುವೇಲು, ಅಡ್ಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಮತ್ತು ಪ್ರಾಂಶುಪಾಲ ಅಮರನಾಥ್ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕ ಕವನ್ ಬಿ. ಸಹಕರಿಸಿದರು.
ಬೆಳಗ್ಗಿನಿಂದ ಪೋಷಕರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕಿ ಅನುರಾಧಾ ಇದನ್ನು ನಿರ್ವಹಿಸಿದರು. ಅಪರಾಹ್ನ ಪೋಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಮನರಂಜನ ಕಾರ್ಯಕ್ರಮಗಳನ್ನು ನೀಡಿದರು.
























