ಕೌಟುಂಬಿಕ ಜಗಳ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಮೃತದೇಹ ಬುಧವಾರ ಸಂಜೆ ನೆತ್ತೋಡಿ ಎಂಬಲ್ಲಿ ಪತ್ತೆಯಾಗಿದೆ. ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ ಪೂಜಾರಿ (42) ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ವಿದೇಶದಲ್ಲಿದ್ದ ಲತೀಶ ಪೂಜಾರಿ ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಭಾನುವಾರ ಮೂಡುಬಿದಿರೆಯ ಹೊಸಂಗಡಿಯಲ್ಲಿರುವ ಹೆಂಡತಿ ಬಂದಿದ್ದರೆನ್ನಲಾಗಿದೆ. ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್‌ಗೆ ಮೆಸೇಜ್ ಮಾಡಿ ಈ ಬಗ್ಗೆ ಹೇಳಿಕೊಂಡಿದ್ದರು. ಅಣ್ಣ ಸರಿಮಾಡುವ, ಆತುರದ ನಿರ್ಧಾರ ಬೇಡ ಎಂದು ಬುದ್ಧಿಮಾತು ಹೇಳಿದ್ದರೆನ್ನಲಾಗಿದೆ. ಆದರೆ ಆತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನೇರವಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.

ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.





















































 
 
error: Content is protected !!
Scroll to Top