ಬಳ್ಳಾರಿ: ಶಬರಿಮಲೆಯ ಅಯ್ಯಪ್ಪ ದೇಗುಲದಿಂದ 4.5 ಕೆ.ಜಿ. ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೇರಳದ SIT ತಂಡ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯಲ್ಲಿ ತಪಾಸಣೆ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ರೊದ್ದಂ ಆಭರಣ ಸಂಸ್ಥೆಯ ಮಾಲಕ ಗೋವರ್ಧನ್‌ನನ್ನು ಬಂಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಾಕ್ಷ್ಯ, ಮಾಹಿತಿ ಸಂಗ್ರಹದ ದೃಷ್ಟಿಯಿಂದ ಈ ಶೋಧ ಕಾರ್ಯ ನಡೆದಿದೆ ಎಂದು ತಿಳಿದು ಬಂದಿದೆ.
ಈ ಹಿಂದೆಯೂ SIT ರೊದ್ದಂ ಸಂಸ್ಥೆಯ ಮೇಲೆ ದಾಳಿ ನಡೆಸಿ ತನಿಖೆ ಮಾಡಿತ್ತು. ಸದ್ಯ ಎರಡನೇ ಬಾರಿಗೆ ಸಂಸ್ಥೆಯ ಮೇಲೆ ನಡೆದಿರುವ ದಾಳಿ ಇದಾಗಿದೆ. ಚಿನ್ನ ಕಳ್ಳತನ, ದುರುಪಯೋಗ ವಿಷಯದಲ್ಲಿ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿಗೆ ಸಮಾನವಾದ ಪಾತ್ರವನ್ನು ಆರೋಪಿ ಗೋವರ್ಧನ್ ಮತ್ತು ಚೆನ್ನೈ ಮೂಲದ ಉದ್ಯಮಿ ಪಂಕಜ್ ಭಂಡಾರಿ ಹೊಂದಿದ್ದು ಈ ವಿಚಾರವನ್ನು ಸಹ ತನಿಖಾಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ. ಈ ಅಂಶ ಆರಂಭಿಕ ತನಿಖೆಯ ಸಾಕ್ಷ್ಯಗಳಿಂದಲೇ ದೃಢಪಟ್ಟಿರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿದೆ.
























