ಸಹಾಯ ಮಾಡಲೆಂದು ಬಂದು ಹಣ ವರ್ಗಾಯಿಸಿ ಪರಾರಿಯಾಗಿದ್ದ ಇಬ್ಬರ ಸೆರೆ
ಮೈಸೂರು: ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಅವರ ಮೊಬೈಲ್ನ ಯುಪಿಐ ಬಳಸಿ 80 ಸಾವಿರ ರೂಪಾಯಿ ಎಗರಿಸಿದ ಅಮಾನವೀಯ ಘಟನೆ ಮೈಸೂರಿನಲ್ಲಿ ಸಂಭವಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಮೇಶ್ ಮತ್ತು ಮನು ಎಂದು ಗುರುತಿಸಲಾಗಿದೆ. ಮೈಸೂರು ತಾಲೂಕಿನ ಕಡಕೊಳದ ಬಳಿ ಡಿ.19ರಂದು ಗಣೇಶ್ ಎಂಬವರು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಬಂದ ರಮೇಶ ಮತ್ತು ಮನು, ಗಣೇಶ್ ಮೊಬೈಲ್ ತೆಗೆದುಕೊಂಡು ಯುಪಿಐ ಮೂಲಕ 80 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಂಡು ಆಸ್ಪತ್ರೆಗೆ ಸೇರಿಸದೆ ಪರಾರಿ ಆಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಣೇಶ್ ಸಹೋದರ ಅಂಕನಾಯಕ, ಗಾಯಗೊಂಡಿದ್ದ ಗಣೇಶ್ರನ್ನು ಆಸ್ಪತ್ರೆಗೆ ಸೇರಿಸಿ ಬಳಿಕಜ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣ ವರ್ಗಾವಣೆ ಮಾಹಿತಿ ಸಂಗ್ರಹಿಸಿ, ಮೈಸೂರಿನ ಮಹದೇವಪುರದ ನಿವಾಸಿಗಳಾದ ರಮೇಶ ಮತ್ತು ಮನುವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ಹಣ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
























