ಸುಳ್ಯದ ವೈದ್ಯಾಧಿಕಾರಿ ರಾಜೀನಾಮೆ : ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ

ಆರು ತಿಂಗಳಿಂದ ಸಂಬಳ ಸಿಗದೆ ಬೇಸತ್ತು ರಾಜೀನಾಮೆ ನೀಡಿರುವ ವೈದ್ಯಾಧಿಕಾರಿ

ಬೆಂಗಳೂರು: ಆರು ತಿಂಗಳಿಂದ ಸಂಬಳ ಸಿಗದ ಹಿನ್ನೆಲೆಯಲ್ಲಿ ಸುಳ್ಯದ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೀನಾಮೆ ನೀಡಿರುವುದು ಸರ್ಕಾರವನ್ನು ಟೀಕಿಸಲು ವಿಪಕ್ಷಕ್ಕೆ ಇನ್ನೊಂದು ಅಸ್ತ್ರವಾಗಿದೆ. ರಾಜ್ಯಮಟ್ಟದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಸುಳ್ಯದ ವೈದ್ಯಾಧಿಕಾರಿ ರಾಜೀನಾಮೆಯೇ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಸುಳ್ಯದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಸರಿಯಾಗಿ ಸಂಬಳ ಆಗದ ಕಾರಣ ರಾಜೀನಾಮೆ ನೀಡಿದ್ದಾರೆ. 6 ತಿಂಗಳಿಂದ ಸಂಬಳ ಬಾರದಿದ್ದಕ್ಕೆ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.





















































 
 

ಈ ಕುರಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆರ್‌. ಅಶೋಕ್‌ ಕಳೆದ ಅಕ್ಟೋಬರ್‌ನಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಗ್ರಂಥಪಾಲಕಿಯೊಬ್ಬರು ಸಂಬಳ ಸಿಗದೆ ಜೀವನ ನಿರ್ವಹಿಸಲು ಕಷ್ಟವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಸಿಗುವುದೇ ಕಷ್ಟ. ಹೀಗಿರುವಾಗ ಇರುವ ವೈದ್ಯರಿಗೆ ಸಂಬಳ ಕೊಡದೆ ಸತಾಯಿಸಿದರೆ ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ ಏನು ಮಾಡಬೇಕು ಸ್ವಾಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

ವೈದ್ಯರು, ಶಿಕ್ಷಕರು, ಗ್ರಂಥಪಾಲಕರಿಗೆ ಸಂಬಳ ಸಿಗದಂಥ ಪರಿಸ್ಥಿತಿಯನ್ನು ಕಾಂಗ್ರೆಸ್‌ ಸರ್ಕಾರ ತಂದಿಟ್ಟಿದೆ. ತಿಂಗಳು ತಿಂಗಳು ಸರಿಯಾಗಿ ಸಂಬಳ ಕೊಡಬೇಕೆಂಬ ಪರಿಜ್ಞಾನ ಈ ಸರ್ಕಾರಕ್ಕೆ ಇಲ್ಲ ಎಂದರೆ ಹೇಗೆ? ಇದು ಸರ್ಕಾರದ ಬೇಜವಾಬ್ದಾರಿ ಅಲ್ಲವೇ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳನ್ನು ಶವಾಗಾರದಂತೆ ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಿದೆ, ಜನೌಷಧಿ ಕೇಂದ್ರಗಳನ್ನು ತೆಗೆದು ಹಾಕಿದ್ದಾರೆ. ಸರ್ಕಾರಿ ನೌಕರರು ಸಂಬಳ ಸಿಗದೆ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಬಂದಿದೆ. ನುಡಿದಂತೆ ನಡೆಯುವ ಗ್ಯಾರಂಟಿ ಇದುವಾ ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರಾದ ಡಾ.ಕುಲದೀಪ್ ಎಂ.ಡಿ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷದಿಂದ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಸಂಬಳ ಬಾರದೆ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತಿದೆ. ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯದ ಹಲವು ಪ್ರಾಥಮಿಕ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಸರ್ಕಾರ ಸಂಬಳ ಬಾಕಿ ಉಳಿಸಿಕೊಂಡಿದೆ.

error: Content is protected !!
Scroll to Top