ಸಿದ್ದರಾಮಯ್ಯನವರ ಪಾಲಿಗೆ ನಿರ್ಣಾಯಕವಾಗಲಿರುವ ತೀರ್ಪು
ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ಗೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಪ್ರಕಟಿಸಲಿದೆ.
ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿತ್ತು. ನ್ಯಾಯಾಲಯ ಬಿ ರಿಪೋರ್ಟ್ ಒಪ್ಪಿದರೆ ಸಿದ್ದರಾಮಯ್ಯ ನಿರಾಳರಾಗುತ್ತಾರೆ. ಒಪ್ಪದೆ ಇದ್ದರೆ ಅವರಿಗೆ ಮತ್ತೆ ದೊಡ್ಡ ಸಂಕಷ್ಟ ಎದುರಾಗಲಿದೆ.
ಡಿ.19 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ಕೇಸ್ ಡೈರಿ ನೀಡುವಂತೆ ಎಸ್‌ಪಿಪಿ ಸೂಚನೆ ನೀಡಿತ್ತು. ಬಿ ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದವಿದ್ದರೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ, ದೂರುದಾರರಿಗೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು.
ಈ ಹಿಂದೆ ಲೋಕಾಯುಕ್ತ ಪೊಲೀಸರು ಸಾಕಷ್ಟು ದೋಷಾರೋಪ ಪಟ್ಟಿ ಹಾಕಿದ್ದರಲ್ಲ. ಯಾಕೆ ಅಂತಿಮ ವರದಿ ಸಲ್ಲಿಕೆ ಮಾಡುತ್ತಿಲ್ಲ ಎಂದು ಜಡ್ಜ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಲೋಕಾಯುಕ್ತ ವಿಶೇಷ ಸರ್ಕಾರಿ ಆಭಿಯೋಜಕ ವೆಂಕಟೇಶ್ ಅರಬಟ್ಟಿ, ಈಗಾಗಲೇ ಅಂತಿಮ ವರದಿ ತಯಾರಿ ಆಗಿದೆ. ಅನುಮತಿ ಸಿಗದ ಕಾರಣ ಸಲ್ಲಿಕೆ ಮಾಡುತ್ತಿಲ್ಲ. ಸ್ವಲ್ಪ ಸಮಯ ನೀಡಿದರೆ ಸೀಲ್ಡ್ ಕವರ್‌ನಲ್ಲಿ ವರದಿ ನೀಡಲು ಸಿದ್ಧಎಂದು ತಿಳಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಕೋರ್ಟ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಎರಡು ವರ್ಷಗಳ ಕಾಲಾವಕಾಶ ನೀಡಿದರೂ ಅಂತಿಮ ವರದಿ ಸಲ್ಲಿಸುವುದಿಲ್ಲ. ತನಿಖಾಧಿಕಾರಿ ಇಲ್ಲೇ ಇದ್ದಾರೆ. ಅವರನ್ನೇ ಕೇಳಿ ಯಾವುದಾದರೂ ತನಿಖೆ ಮಾಡಿದ್ದಾರಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ಸೈಟ್‌ಗಳ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಸಿತ್ತು. ಬಿ ರಿಪೋರ್ಟ್‌ನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಖುದ್ದು ನ್ಯಾಯಾಲಯದಲ್ಲಿ ಸ್ನೇಹಮಯಿ ಕೃಷ್ಣ ಅವರೇ ವಾದಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ವರದಿ ಸಲ್ಲಿಸಲು 2 ತಿಂಗಳು ಗಡುವು ನೀಡಿ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮುನ್ನ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ತಕರಾರು ಅರ್ಜಿ ಸಲ್ಲಿಸಿತ್ತು.
























