ಮೇಲ್ಕಾರ್: ಬದುಕಿನಲ್ಲಿ ಚಿಂತನೆಯಿಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯ. ಜ್ಞಾನ ಸಂಪನ್ನರಾದ ಹಿರಿಯರ ಚಿಂತನೆಗಳನ್ನು ಕಿರಿಯರು ಪಾಲಿಸಿಕೊಂಡು ಬಂದರೆ ಸಮಾಜದಲ್ಲಿ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಿದೆ ಎಂದು ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ ತಿಳಿಸಿದರು.
ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಅ. ಕ. ಹಿರಿಯರ ಸೇವಾ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ಹಿರಿಯರ ಸೇವಾ ಪ್ರತಿಷ್ಠಾನವು ಕಳೆದ ನಾಲ್ಕು ವರ್ಷಗಳಿಂದ ಹಿರಿಯರಿಗಾಗಿ ಮತ್ತು ಸಾಮಾಜಿಕವಾಗಿ ಉಪಯುಕ್ತವೆನಿಸುವ ಸೇವಾ ಕಾರ್ಯಗಳನ್ನು ಎಲ್ಲರ ಸಹಕಾರದಿಂದ ಮಾಡಿಕೊಂಡು ಬಂದಿದೆ ಎಂದರು.

ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪಾವಂಜೆ ನಾಗವ್ರಜ ಕ್ಷೇತ್ರ ಅಧ್ಯಕ್ಷ ಶಶೀoದ್ರ ಕುಮಾರ್, ಪ್ರತಿಷ್ಠಾನದ ಉದ್ದೇಶಗಳು ಉತ್ತಮವಾಗಿದ್ದು ಹಿರಿಯರ ಬದುಕಿಗೆ ದಾರಿದೀಪವಾಗಲೆಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ವಿದ್ವಾನ್ ಸೋಂದ ಭಾಸ್ಕರ್ ಭಟ್ ಕಟೀಲು ಮಾತನಾಡಿ, ಹಿರಿಯರು ವರ್ತಮಾನ ಕಾಲದಲ್ಲಿ ತನ್ನ ಕುಟುಂಬದ ಸದಸ್ಯರ ಜೊತೆಯಲ್ಲಿ ಹಾಗೂ ಸಮಾಜದಲ್ಲಿ ಹೊಂದಾಣಿಕೆಯಿಂದ ಬದುಕುವ ಅನಿವಾರ್ಯತೆ ಇದೆ. ಕಿರಿಯರ ಮನಸ್ಥಿತಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಪಾವಂಜೆಯ ಧರ್ಮದರ್ಶಿ ಪ್ರೊ. ನಿರಂಜನ್ ಯಾಜಿ, ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ. ವಿ. ನಾರಾಯಣ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಯಕ್ಷಗಾನ ಕಲಾವಿದ ವರ್ಕಾಡಿ ರವಿ ಅಲೆವೂರಾಯರನ್ನು ಪುತ್ತೂರು ಘಟಕದ ವತಿಯಿಂದ ಗೌರವಿಸಲಾಯಿತು. ಬಂಟ್ವಾಳ ಘಟಕದ ವತಿಯಿಂದ ಮಂಚಿ ಕನಕ ಗೋಶಾಲೆಗೆ ಆರ್ಥಿಕ ನೆರವನ್ನು ನೀಡಲಾಯಿತು.
ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಮಂಗಳೂರು ಘಟಕದ ಪದಾಧಿಕಾರಿಗಳಾದ ಬಾಲಕೃಷ್ಣ ಶೆಟ್ಟಿ, ಈಶ್ವರ ಭಟ್ ಗುಂಡ್ಯಡ್ಕ, ಉದಯಶಂಕರ ರೈ ಪುಣಚ, ಕೃಷ್ಣಶರ್ಮ ಅನಾರು, ಯಂ. ಜಯರಾಮ ಭಂಡಾರಿ ಧರ್ಮಸ್ಥಳ, ಭರತ್ ಕೆ., ಗಣೇಶ ಆಚಾರ್ಯ ಜಪ್ಪು, ಚಂದ್ರಶೇಖರ ಆಳ್ವ ಪಡುಮಲೆ, ಲೋಕೇಶ್ ಹೆಗ್ಡೆ ಪುತ್ತೂರು, ಗಣೇಶ ಭಟ್ ಕೆ. ಬೆಳ್ತಂಗಡಿ, ಭವಾನಿ ಶಂಕರ ಶೆಟ್ಟಿ ಪುತ್ತೂರು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.

ಆರಂಭದಲ್ಲಿ ಧನ್ವಂತರಿ ಪೂಜೆ ಹಾಗೂ ದೇವರಿಗೆ ವಿಶೇಷ ಸೇವೆಯನ್ನು ಪ್ರತಿಷ್ಠಾನದ ವತಿಯಿಂದ ನಡೆಸಲಾಯಿತು. ಬಳಿಕ ಯಜ್ಞೇಶ್ ಆಚಾರ್ ಸುರತ್ಕಲ್ ಮತ್ತು ಸರ್ಪಂಗಳ ಈಶ್ವರ ಭಟ್ ಇವರಿಂದ ಕಾವ್ಯವಾಚನ ಮತ್ತು ಪ್ರವಚನ ಜರಗಿತು.
ಪ್ರೊ. ವೇದವ್ಯಾಸ ರಾಮ ಕುಂಜ ಸ್ವಾಗತಿಸಿ, ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷ ದುಗ್ಗಪ್ಪ ಎನ್. ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ವಂದಿಸಿದರು.
























