ಪಠ್ಯಪುಸ್ತಕ, ಶೂ, ಸಾಕ್ಸ್ ಸಹಿತ ಎಲ್ಲ ಸೌಲಭ್ಯ ಕೊಡಲು ನಿರ್ಧಾರ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿ ವರೆಗಿನ ಸರಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇದಲ್ಲದೆ ಪಠ್ಯಪುಸ್ತಕ, ಶೂ, ಸಾಕ್ಸ್, ಹಾಲು, ಮೊಟ್ಟೆ ಸೇರಿ ಎಲ್ಲ ಸೌಲಭ್ಯವನ್ನು ಪಿಯುಸಿ ತನಕ ವಿಸ್ತರಿಸುತ್ತೇವೆ ಎಂದಿದ್ದಾರೆ.
ಪ್ರಸ್ತುತ ನೀಡುತ್ತಿರುವ ಬಿಸಿಯೂಟದಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಇದರಿಂದ ಹೆಚ್ಚುವರಿಯಾಗಿ 200 ಕೋಟಿ ರೂ. ವೆಚ್ಚವಾಗಲಿದೆ. ಇದು ಸರ್ಕಾರದ ಪಾಲಿಗೆ ಹೊರೆ ಏನಲ್ಲ. ಮಕ್ಕಳ ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಲಿದೆ ಎಂದರು.
ರಾಜ್ಯದಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಿಗೆ ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಆ ಶಾಲೆಗಳಲ್ಲಿ ಸಕಲ ಸೌಲಭ್ಯಗಳು ಇರಲಿವೆ. ಗ್ರಂಥಾಲಯವೂ ಇರಲಿದೆ. ಅದಕ್ಕೆ ಅಗತ್ಯವಿರುವ ಗ್ರಂಥಪಾಲಕರನ್ನು ಸ್ಥಳೀಯವಾಗಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಸಾಧ್ಯವೋ ಅಥವಾ ಸರಕಾರವೇ ನೇಮಿಸಬೇಕೋ ಈ ಎಲ್ಲದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೂಲ್ ಬ್ಯಾಂಡ್ ಆರಂಭಿಸಲಾಗುವುದು ಎಂದು ತಿಳಿಸಿದರು.
ನಾನು ಶಿಕ್ಷಣ ಸಚಿವನಾದಾಗ ಅನೇಕರು ಕನ್ನಡ ಬರಲ್ಲ ಎಂದು ಹೀಯಾಳಿಸಿದ್ದರು. ಅವರಿಗೆ ಈ ಇಲಾಖೆಯಲ್ಲಿ ಕೆಲಸ ಮಾಡುವ ಮೂಲಕ ಉತ್ತರ ಕೊಡುತ್ತೇನೆ. ಸಾಮಾಜಿಕ ಜಾಲತಾಣಗಳಿಗೆ ತಂದೆ ತಾಯಿ ಯಾರೂ ಇಲ್ಲ. ಅಲ್ಲಿನ ವಿಷಯಗಳಿಟ್ಟುಕೊಂಡು ವಿಧಾನಸಭೆಯಲ್ಲಿ ಪ್ರಶ್ನಿಸಲು ಬಂದಿದ್ದರು. ಅವರಿಗೆ ಕೆಲಸ ಮಾಡುವ ಮೂಲಕ ಭೇಷ್ ಎನಿಸಿಕೊಂಡಿದ್ದೇನೆ. ಶೀಘ್ರವೇ ಸರಕಾರಿ ಶಾಲೆಗಳನ್ನು ಪ್ರಬಲಗೊಳಿಸಲಾಗುವುದು ಎಂದು ಹೇಳಿದರು.
























