ಸರ್ಕಾರದ ಶಿಷ್ಟಾಚಾರದಂತೆ ಆಹ್ವಾನ ಪತ್ರದಲ್ಲಿ ಅನ್ಯಧರ್ಮದ ಜನಪ್ರತಿನಿಧಿಗಳ ಹೆಸರು
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರದಿಂದ ನಡೆಯಲಿರುವ ಕಿರುಷಷ್ಠಿ ಮಹೋತ್ಸವಕ್ಕೆ ಅನ್ಯಧರ್ಮೀಯರನ್ನು ಆಹ್ವಾನಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಇಂದಿನಿಂದ ಡಿ.26ರವರೆಗೆ ನಡೆಯಲಿರುವ ಕಿರುಷಷ್ಠಿ ಮಹೋತ್ಸವದ ಧರ್ಮಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಶಿಷ್ಟಾಚಾರದಂತೆ ಅನ್ಯಧರ್ಮೀಯರನ್ನೂ ಆಹ್ವಾನಿಸಲಾಗಿದೆ. ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರನ್ನು ಆಹ್ವಾನಿಸಿರುವುದು ಸರಿಯಲ್ಲ, ತಕ್ಷಣ ಅದನ್ನ ತಡೆಯಬೇಕೆಂದು ಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ಕ್ಷೇತ್ರದ ಆಡಳಿತಾಧಿಕಾರಿಗೆ ಮನವಿ ನೀಡಲಾಗಿದೆ. ಆಹ್ವಾನ ವಾಪಸ್ ಪಡೆಯದೇ ಇದ್ದರೆ ಡಿ.22ರಂದು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.
ಕುಕ್ಕೆ ಕ್ಷೇತ್ರ ಮುಜರಾಯಿ ಇಲಾಖೆಯ ಅಧೀನದಲ್ಲಿರುವುದರಿಂದ ಸರ್ಕಾರದ ಶಿಷ್ಟಾಚಾರ ಪ್ರಕಾರ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಅವರಲ್ಲಿ ಸ್ಪೀಕರ್ ಯು.ಟಿ.ಖಾದರ್, ಎಂಎಲ್ಸಿ ಐವನ್ ಡಿಸೋಜ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಹೀದ್ ತೆಕ್ಕಿಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಜೋಕಿಂ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಶಾಲೆಟ್ ಪಿಂಟೋ ಹೆಸರಿದೆ.
ಇದು ಹಿಂದೂ ಧರ್ಮಿಯರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಆಹ್ವಾನಿಸುವುದು ಖಂಡನೀಯ ಎಂದು ಕ್ಷೇತ್ರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಚಿದಾನಂದ ಕಂದಡ್ಕ ಮತ್ತು ಸದಸ್ಯರಿಂದ ದೂರು ನೀಡಿದ್ದಾರೆ.
























