ರಾಜ್ಯವನ್ನು ಬೆಚ್ಚಿಬೀಳಿಸಿದ ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಘಟನೆ

ತುಂಬು ಗರ್ಭಿಣಿ ಮಗಳನ್ನು ಗುದ್ದಲಿಯಿಂದ ಹೊಡೆದು ಕೊಂದ ತಂದೆ

ಬೆಂಗಳೂರು : ಅನ್ಯ ಜಾತಿಯ ಯುವಕನನ್ನು ಮದುವೆಯಾದ ಮಗಳನ್ನು ತಂದೆಯೇ ಬರ್ಬರವಾಗಿ ಕೊಲೆ ಮಾಡಿರುವ ಮರ್ಯಾದಾ ಹತ್ಯೆ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಇನಾಂವೀರಾಪುರ ಗ್ರಾಮದ ಮಾನ್ಯಾ (19) ಹತ್ಯೆಯಾದ ಯುವತಿ. ಈಕೆ ಅದೇ ಗ್ರಾಮದ ವಿವೇಕಾನಂದ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕ ಅನ್ಯಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ಪ್ರಕಾಶಗೌಡ ಮನೆಗೆ ನುಗ್ಗಿ, ಮಗಳು 7 ತಿಂಗಳ ಗರ್ಭಿಣಿ ಎಂಬುದನ್ನು ನೋಡದೆ ಪೈಪ್ ಮತ್ತು ಗುದ್ದಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿವೆ.





















































 
 

ಮಾನ್ಯಾ ಮತ್ತು ವಿವೇಕಾನಂದ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಗ ಇನ್ಸ್ಟಾಗ್ರಾಂ ಮೆಸೇಜ್‍ನಿಂದ ಪ್ರೀತಿ ಹುಟ್ಟಿತ್ತು. ಈ ವಿಚಾರ ಎರಡೂ ಕುಟುಂಬಕ್ಕೂ ತಿಳಿದಿತ್ತು. ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು. ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದನನ್ನು ಬಿಟ್ಟು ಬದುಕುವುದಿಲ್ಲ ಎಂದು ಹಠ ಹಿಡಿದಿದ್ದಳು. ಧಾರವಾಡದಲ್ಲಿ ಕೋಚಿಂಗ್‍ಗೆ ಹೋಗಿದ್ದ ವಿವೇಕಾನಂದನ ಬಳಿ ಹೋಗಿ ಮದುವೆಯಾಗದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಹೀಗಾಗಿ ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂ.19ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟ್ರರ್ ಮದುವೆಯಾಗಿದ್ದ. ಈ ಸಮಯದಲ್ಲಿ ಪೊಲೀಸರು ಎರಡು ಕುಟುಂಬ ಕರೆದು ರಾಜಿ ಪಂಚಾಯತಿ ಮಾಡಿದ್ದರು.

ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹೋಗಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದು, ಹೀಗಾಗಿ ಮಾನ್ಯ ಮತ್ತು ವಿವೇಕಾನಂದ ಡಿಸೆಂಬರ್ 8 ರಂದು ಸ್ವಗ್ರಾಮಕ್ಕೆ ಹಿಂತಿರುಗಿದ್ದರು. ಈ ಸಮಯದಲ್ಲಿ ಕೂಡ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ರಾಜಿ ಮಾಡಿಸಿದ್ದದು. ಆದರೆ ಡಿ.21ರಂದು ಸಂಜೆ ಮತ್ತೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂವರ ಮೇಲೆ ಪೈಪ್ ಮತ್ತು ಗುದ್ದಲಿಯಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

error: Content is protected !!
Scroll to Top