ಮಾಜಿ ಶಾಸಕರ ಸಹಿತ 27 ಮಂದಿಯ ವಿರುದ್ಧ ಕೇಸ್ ದಾಖಲು
ವಿಟ್ಲ: ಕೇಪು ಉಳ್ಳಾಲ್ತಿ ಕಜಂಬು ಉತ್ಸವದಂಗವಾಗಿ ನಡೆಯುವ ಕೋಳಿಅಂಕದ ವಿವಾದ ಈಗ ರಾಜಕೀಯ ಮೇಲಾಟವಾಗಿ ಬದಲಾಗಿದೆ. ಶನಿವಾರ ಶಾಸಕ ಅಶೋಕ್ ರೈಯವರು ತಾನೇ ಮುಂದೆ ನಿಂತು ಕೋಳಿಅಂಕ ಮಾಡಿಸಿದ ಬಳಿಕ ಭಾನುವಾರ ಬಿಜೆಪಿಯವರು ಕೋಳಿಅಂಕ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಭಾನುವಾರವೂ ಕೋಳಿಅಂಕ ನಡೆದಿದ್ದು, ಈ ಕೋಳಿಅಂಕಕ್ಕೆ ಬಿಜೆಪಿ ನಾಯಕರು ರಕ್ಷಣೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಮುರಳೀಧರ ರೈ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ಅಶೋಕ ಶೆಟ್ಟಿ ವಿಟ್ಲ, ರಾಜೇಶ್ ಬಾಳೆಕಲ್ಲು ಸಹಿತ 27 ಮಂದಿಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಪುವಿನ ಮುರಳೀಧರ ರೈಯವರಿಗೆ ಸೇರಿದ ಗದ್ದೆಯಲ್ಲಿ ಭಾನುವಾರ ಹಲವು ಜನರು ಸೇರಿ ಅಕ್ರಮವಾಗಿ ಕೋಳಿಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ಹಲವಾರು ಜನರು ಗುಂಪು ಸೇರಿಕೊಂಡು ಕೋಳಿಅಂಕ ಆಟವಾಡುತ್ತಿರುವುದು ಕಂಡುಬಂದಿದೆ. ಅಕ್ರಮ ಕೋಳಿಅಂಕಕ್ಕೆ ದಾಳಿ ನಡೆಸಿ 20 ಕೋಳಿಗಳನ್ನು ಸ್ವಾಧೀನ ಪಡಿಸಿ, 20 ಜನರನ್ನು ವಶಕ್ಕೆ ಪಡೆಯಲಾಗಿದೆ, ಕೋಳಿಅಂಕಕ್ಕೆ ಬಳಸುವ ಕತ್ತಿ (ಬಾಲು)ಗಳನ್ನು ಸ್ವಾಧೀನಪಡಿಸಲಾಗಿದೆ.
ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 191/2025, ಕಲಂ: 189(2), 49, 221, 223, 190 BNS 2023 ಮತ್ತು 3, 11 ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಪು ಕಜಂಬು ಉತ್ಸವದ ಬಳಿಕ ಮೂರು ದಿನ ಕೋಳಿಅಂಕ ನಡೆಯುವುದು ವಾಡಿಕೆ. ಇದು ಜೂಜಾಟ ಅಲ್ಲ ಧಾರ್ಮಿಕ ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ಎಂದು ಕೋಳಿಅಂಕ ಮಾಡಿಸುವವರ ವಾದ. ಶನಿವಾರ ಕೋಳಿಅಂಕ ನಡೆಯುವ ಸ್ಥಳಕ್ಕೆ ಪೊಲೀಸ್ ದಾಳಿಯಾದಾಗ ಶಾಸಕ ಅಶೋಕ್ ರೈ ತಾನೇ ಮುಂದೆ ನಿಂತು ಕೋಳಿಅಂಕ ನಡೆಸಿದ್ದರು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅಶೋಕ್ ರೈಯವರ ಮೇಲೆ ಕೇಸ್ ಕೂಡ ದಾಖಲಾಗಿದೆ. ಇದರ ಬೆನ್ನಲ್ಲೇ ಭಾನುವಾರದ ಕೋಳಿಅಂಕದ ಅಖಾಡಕ್ಕೆ ಬಿಜೆಪಿಯವರು ಎಂಟ್ರಿ ಕೊಟ್ಟದ್ದು, ಇದರಿಂದಾಗಿ ಕೋಳಿಅಂಕವೀಗ ರಾಜಕೀಯ ಮೇಲಾಟದ ಅಂಕವಾಗಿ ಬದಲಾಗಿದೆ.
























