ಧಾರ್ಮಿಕ ಮಹತ್ವದ ಕಜಂಬು ಜಾತ್ರೋತ್ಸವದ ಕೋಳಿ ಅಂಕಕ್ಕೆ ಪೊಲೀಸರ ತಡೆ
ತಾನೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ್ದ ಅಶೋಕ್ ರೈ
ಮಂಗಳೂರು: ಪೊಲೀಸರ ನಿರ್ಬಂಧದ ನಡುವೆಯೂ ಕೋಳಿ ಅಂಕ ಮಾಡಿಸಿದ ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ 17 ಮಂದಿ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಟ್ಲದ ಕೇಪುವಿನ ಧಾರ್ಮಿಕ ಮಹತ್ವವುಳ್ಳ ಐತಿಹಾಸಿಕ ಉಳ್ಳಾಲ್ತಿ ಜಾತ್ರೆಯ ಪ್ರಯುಕ್ತ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಕೋಳಿ ಅಂಕ ಶನಿವಾರ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಪೊಲೀಸರು ಕೋಳಿ ಅಂಕ ನಿಲ್ಲಿಸಲು ಬಂದಾಗ ಶಾಸಕ ಅಶೋಕ್ ಕುಮಾರ್ ರೈಯವರು ತಾನೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ್ದಲ್ಲದೆ ಪೊಲೀಸರಿಗೇ ಸವಾಲು ಹಾಕಿದ್ದಾರೆ. ಶಾಸಕರ ಈ ನಡೆ ವ್ಯಾಪಕ ಚರ್ಚೆಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 17 ಜನರ ಮೇಲೆ ವಿಟ್ಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಆರೋಪದ ಮೇಲೆ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ 16 ಜನರ ವಿರುದ್ಧ ಪೊಲೀಸರು ಕೇಸ್ ಹಾಕಿದ್ದಾರೆ. ಕೋಳಿ ಅಂಕಕ್ಕೆ ತಂದಿದ್ದ 22 ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಜಂಬು ಜಾತ್ರೋತ್ಸವದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ಬಾರಿ ಊರಿನವರು ಕೋಳಿ ಅಂಕವನ್ನು ಆಯೋಜಿಸಿದ್ದರು. ಕೋಳಿ ಅಂಕ ಆಯೋಜನೆ ಮಾಡಿದ ವಿಚಾರ ತಿಳಿದ ವಿಟ್ಲ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಇಲ್ಲಿ ಕೋಳಿ ಅಂಕ ಮಾಡುವಂತಿಲ್ಲ. ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ತನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಶೋಕ್ ರೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮನ್ನು ನಾವು ದೂರುವುದಿಲ್ಲ. ಮೇಲಧಿಕಾರಿಗಳು ಹೇಳಿದಂತೆ ನೀವು ಮಾಡುತ್ತಿರಬಹುದು. ಆದರೆ ಇಲ್ಲಿ ಜಾತ್ರೆಯ ವೇಳೆ ನಡೆಯುವ ಕೋಳಿ ಅಂಕ ಪರಂಪರಾಗತವಾಗಿ ನಡೆದುಕೊಂಡೇ ಬಂದಿದೆ. ಇವರು ಯಾರೂ ಹಣಕಟ್ಟಿ ಜೂಜು ಮಾಡುತ್ತಿಲ್ಲ. ಕುದುರೆ, ಕ್ರಿಕೆಟ್ ಬೆಟ್ಟಿಂಗ್‌ನಂತೆ ಇಲ್ಲಿ ಯಾವುದೂ ನಡೆಯುವುದಿಲ್ಲ. ಈ ಕೋಳಿ ಅಂಕ ಆಯೋಜನೆಗೆ ಅನುಮತಿ ನೀಡಬೇಕು ಎಂದು ಹೇಳಿದ್ದರು.
ನಾನಿಲ್ಲೆ ಇರ್ತೇನೆ ನೀವು ಕೋಳಿ ಅಂಕ ಮುಂದುವರಿಸಿ. ಬಂಧಿಸುವುದಾದರೆ ಮೊದಲು ನನ್ನ ಬಂಧಿಸಿ ಎಂದು ಶಾಸಕ ಹೇಳಿದ್ದಾರೆ. ಇದು ಧಾರ್ಮಿಕ ಹಿನ್ನೆಲೆಯಲ್ಲಿ ನಡೆಯುವ ಕೋಳಿ ಅಂಕ. 3 ದಿನದ ಬದಲು 1 ದಿನ ನಡೆಯಲಿ ಮೇಲಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ಎಂದಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನೂ ಮಾಡಿಲ್ಲ. ಪ್ರತಿ ವರ್ಷ ಮೂರು ದಿನ ಕೋಳಿ ಅಂಕ ನಡೆಯುತ್ತದೆ. ಇಲ್ಲಿ ಸಾವಿರಾರು ಜನ ದೇವರಲ್ಲಿ ಹರಕೆ ಹೊತ್ತಿರುತ್ತಾರೆ. ಇಲ್ಲಿ ಯಾವುದೇ ಜೂಜುಗಳಿಲ್ಲ, ಧಾರ್ಮಿಕ ನಂಬಿಕೆ, ಹರಕೆ ರೂಪದಲ್ಲಿ ಕೋಳಿ ತಂದು ಅಂಕ ಮಾಡಿಸುತ್ತಾರೆ ಎಂದರು.
ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿಲ್ಲ ಎಂದು ಗೊತ್ತಿದೆ, ಆದರೆ ಇದು ಜನರ ಧಾರ್ಮಿಕ ಭಾವನೆಗಳ ವಿಚಾರ, ಅದಕ್ಕೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದೆವು. 3 ಗಂಟೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆವು. ಆದರೂ ಸಹ ಪೊಲೀಸರು ಜನರನ್ನ ಚದುರಿಸಲು ಯತ್ನಿಸಿದ್ದಾರೆ. ಧರ್ಮವನ್ನು ಕಿತ್ತುಕೊಳ್ಳುವ ಪ್ರಯತ್ನ ಆಗ್ತಿದೆ. ನನ್ನ ವಿಧಾನಸಭಾ ಕ್ಷೇತ್ರದ ಜನರು ನನ್ನ ಬಳಿ ಹೇಳಿದರು. ನಾನು ಜನರ ಜೊತೆಗೆ ಮೂರು ಗಂಟೆಗಳ ಕಾಲ ಇದ್ದೆ. ಜನರು ತಮ್ಮ ಹರಕೆಯನ್ನು ತೀರಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.
























