ಮಲಯಾಳಂ ಚಿತ್ರರಂಗದ ಖ್ಯಾತ ನಟ ಶ್ರೀನಿವಾಸನ್‌ ನಿಧನ

225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ನಟ, ನಿರ್ಮಾಪಕ, ನಿರ್ದೇಶಕ

ಕೊಚ್ಚಿ : ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೇರಳದ ಉದಯಂಪೆರೂರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಶ್ರೀನಿವಾಸನ್ ಅವರಿಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಇದ್ದವು. ಕಳೆದ ಕೆಲ ವರ್ಷಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಇತ್ತೀಚೆಗೆ ಅವರನ್ನು ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು. ಆದರೆ, ಅವರನ್ನು ಬದುಕಿಸಿಕೊಳ್ಳಲು ವೈದ್ಯರ ಬಳಿ ಸಾಧ್ಯವಾಗಿಲ್ಲ.





















































 
 

ನಟನಾಗಿ, ಸಿನಿಮಾ ಬರಹಗಾರನಾಗಿ, ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದರು. ಅವರ ನಿಧನವು ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋಗಳ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ 1956ರ ಏಪ್ರಿಲ್ 6ರಂದು ಶ್ರೀನಿವಾಸನ್ ಶಾಲಾ ಶಿಕ್ಷಕರೊಬ್ಬರ ಪುತ್ರನಾಗಿ ಜನಿಸಿದರು. ಅವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಚೆನ್ನೈನಲ್ಲಿ ಅವರು ಫಿಲ್ಮ್​ ಆ್ಯಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ಸಿನಿಮಾ ಸಂಬಂಧಿತ ತರಬೇತಿ ಪಡೆದರು.

1976ರ ‘ಮಣಿಮುಳಕ್ಕಮ್’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ವೃತ್ತಿ ಜೀವನದುದ್ದಕ್ಕೂ 2-3 ತಮಿಳು ಸಿನಿಮಾ ಮಾಡಿದ್ದು ಹೊರತುಪಡಿಸಿ ಉಳಿದ ಎಲ್ಲ ಚಿತ್ರಗಳನ್ನು ಅವರು ಮಾಡಿದ್ದು ಮಲಯಾಳಂನಲ್ಲಿಯೇ. ಸುಮಾರು 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಶ್ರಮಿಸಿದ ಅವರು, 225ಕ್ಕೂ ಅಧಿಕ ಸಿನಿಮಾ ಮಾಡಿದ್ದಾರೆ. ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದು 2018ರಲ್ಲಿ.

ಹಾಸ್ಯ ಪಾತ್ರಗಳಲ್ಲಿ ಶ್ರೀನಿವಾಸನ್‌ ತನ್ನದೇ ಆದ ಛಾಪು ಮೂಡಿಸಿದ್ದರು. ಮೋಹನ್‌ಲಾಲ್‌ ಸೇರಿದಂತೆ ಮಲಯಾಳಂನ ಹಲವು ಖ್ಯಾತ ಹೀರೊಗಳ ಜೊತೆಗೆ ಶ್ರೀನಿವಾಸ್‌ ಹಾಸ್ಯ ಪಾತ್ರಗಳಲ್ಲಿ ಸರಿಸಮಾನವಾಗಿ ಮಿಂಚಿದ್ದರು. ಮೋಹನ್‌ಲಾಲ್‌ ಜೊತೆಗೆ ನಟಿಸಿದ ಅನೇಕ ಸಿನೆಮಾಗಳು ಸೂಪರ್‌ ಹಿಟ್‌ ಆಗಿದ್ದು ಮಾತ್ರವಲ್ಲದೆ ಮಲಯಾಳಂ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ್ದವು.

ಚಿತ್ರಕಥೆ ಬರಹಗಾರನಾಗಿಯೂ ಶ್ರೀನಿವಾಸನ್ ಕೆಲಸ ಮಾಡಿದ್ದಾರೆ. ಅವರು ಮಮ್ಮುಟ್ಟಿ ಹಾಗೂ ನಿವೀನ್ ಪೌಳಿಗೆ ತಲಾ ಒಂದೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಎರಡು ಸಿನಿಮಾ ನಿರ್ಮಿಸಿದ್ದಾರೆ. ಶ್ರೀನಿವಾಸನ್ ಅವರು, ರಾಷ್ಟ್ರ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್​ ಫೆರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟನಾಗಿ, ಬರಹಗಾರನಾಗಿ ಈ ಗೌರವ ಸ್ವೀಕರಿಸಿದ್ದಾರೆ.

ಶ್ರೀನಿವಾಸನ್​ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾದ ವಿನೀತ್ ಹಾಗೂ ಧ್ಯಾನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಿನೀತ್ ನಿರ್ದೇಶನದ ‘ಹೃದಯಪೂರ್ವಂ’ ಸೂಪರ್ ಹಿಟ್ ಆಯಿತು.

error: Content is protected !!
Scroll to Top