3-1 ಅಂತರದಿಂದ ಸರಣಿ ಗೆದ್ದುಕೊಂಡು ಬೀಗಿದ ಟೀಂ ಇಂಡಿಯಾ
ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 30 ರನ್ಗಳಿಂದ ಜಯಗಳಿಸಿದೆ. ಈ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಭಾರತ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹಾರ್ದಿಕ್ ಹಾಗೂ ತಿಲಕ್ ಅವರ ಸ್ಫೋಟಕ ಅರ್ಧ ಶತಕಗಳ ನೆರವಿನಿಂದ 231 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ಗಳ ಅಂತ್ಯಕ್ಕೆ ರನ್ 201 ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಪ್ರವಾಸವನ್ನು ಆರಂಭಿಸಿದ್ದ ಆಫ್ರಿಕಾ ತಂಡ, ಟಿ20 ಸರಣಿ ಸೋಲಿನೊಂದಿಗೆ ತನ್ನ ಪ್ರವಾಸವನ್ನು ಅಂತ್ಯಗೊಳಿಸಿದೆ. ಇದು ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ಸತತ 19ನೇ ಸರಣಿ ಗೆಲುವಾಗಿದ್ದು, ಸೂರ್ಯಕುಮಾರ್ ಪಡೆ ಈ ಮಾದರಿಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ (37 ರನ್) ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಆರಂಭಿಕ ಅಭಿಷೇಕ್ ಶರ್ಮಾ (34) ಅವರೊಂದಿಗೆ ಉತ್ತಮ ಆರಂಭವನ್ನು ನೀಡಿದರು. ನಾಯಕ ಸೂರ್ಯಕುಮಾರ್ ಯಾದವ್ (5) ಮತ್ತೆ ವಿಫಲರಾದರು. ಆದರೆ ನಂತರ ಜೊತೆಯಾದ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಬಿರುಗಾಳಿ ಇನ್ನಿಂಗ್ಸ್ ಆಡಿ ಒಟ್ಟಾಗಿ ನಾಲ್ಕನೇ ವಿಕೆಟ್ಗೆ 105 ರನ್ಗಳ ಭರ್ಜರಿ ಪಾಲುದಾರಿಕೆಯನ್ನು ನೀಡಿದರು. ಹಾರ್ದಿಕ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ತಿಲಕ್ ಸರಣಿಯ ತಮ್ಮ ಎರಡನೇ ಅರ್ಧಶತಕವನ್ನು ಪೂರೈಸಿದರು. ಅಂತಿಮವಾಗಿ ಹಾರ್ದಿಕ್ 25 ಎಸೆತಗಳಲ್ಲಿ 63 ರನ್ ಬಾರಿಸಿದರೆ, ತಿಲಕ್ ವರ್ಮಾ 42 ಎಸೆತಗಳಲ್ಲಿ 73 ರನ್ ಸಿಡಿಸಿದರು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಅಷ್ಟೇ ಸ್ಫೋಟಕ ಆರಂಭ ಪಡೆದುಕೊಂಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್ ಮತ್ತೊಂದು ಅದ್ಭುತ ಅರ್ಧಶತಕ ಸಿಡಿಸಿ 10ನೇ ಓವರ್ನಲ್ಲಿ ತಂಡವನ್ನು 100 ಗಡಿ ದಾಟಿಸಿದರು. ಡಿ ಕಾಕ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆ ಎಂದು ತೋರುತ್ತಿತ್ತು. ಆದರೆ ಈ ವೇಳೆ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ, ಡಿ ಕಾಕ್ರನ್ನು ಪೆವಿಲಿಯನ್ಗಟ್ಟಿದರು. ನಂತರ ಹಾರ್ದಿಕ್, ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರನ್ನು ಔಟ್ ಮಾಡುವ ಮೂಲಕ ಆಫ್ರಿಕಾ ವೇಗಕ್ಕೆ ಕಡಿವಾಣ ಹಾಕಿದರು.
ನಂತರ ವರುಣ್ ಚಕ್ರವರ್ತಿ 13ನೇ ಓವರ್ನಲ್ಲಿ ಸತತ ಎಸೆತಗಳಲ್ಲಿ ಐಡೆನ್ ಮಾರ್ಕ್ರಾಮ್ ಮತ್ತು ಡೊನೊವನ್ ಫೆರೇರಾ ಅವರನ್ನು ಔಟ್ ಮಾಡುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಅಲ್ಲಿಂದ ದಕ್ಷಿಣ ಆಫ್ರಿಕಾದ ವಿಕೆಟ್ಗಳು ಪತನವಾಗುತ್ತಲೇ ಸಾಗಿದವು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ ಕೇವಲ 201 ರನ್ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ವರುಣ್ ಚಕ್ರವರ್ತಿ 4 ವಿಕೆಟ್ ಪಡೆದರು.
























