ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ

ಬೆಳಗ್ಗಿನ ತನಕ ಪ್ರತಿಭಟನೆ ನಡೆಸಿದ ವಿಪಕ್ಷಗಳು

ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದ್ದ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ-2025 ಅನ್ನು ಶುಕ್ರವಾರ ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ತಡರಾತ್ರಿ 12.15ರ ಸುಮಾರಿಗೆ ಧ್ವನಿ ಮತದ ಮೂಲಕ ಮಸೂದೆಯನ್ನ ಅಂಗೀಕರಿಸಲಾಯಿತು.

ಮಧ್ಯರಾತ್ರಿವರೆಗೆ ನಡೆದ ಚರ್ಚೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (ಮನ್ರೇಗಾ) ಹೆಸರು ಬದಲಿಸಿ ಪರಿಚಯಿಸಲಾದ ಮಸೂದೆಗೆ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಗದ್ದಲ ಕೋಲಾಹಲ ಏರ್ಪಟ್ಟಿತು. ಕೊನೆಗೆ ಮಸೂದೆಯನ್ನ ವಿರೋಧಿಸಿ ವಿಪಕ್ಷಗಳು ಸಭಾತ್ಯಾಗ ನಡೆಸಿದವು. ಇದರ ನಡುವೆಯೇ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಸೂದೆಗೆ ಅಂಗೀಕಾರ ಪಡೆದುಕೊಂಡರು.





















































 
 

ಜಿ ರಾಮ್‌ ಜಿ ವಿಧೇಯಕವನ್ನು ವಿರೋಧಿಸಿ ವಿಪಕ್ಷ ತೃಣಮೂಲ ಕಾಂಗ್ರೆಸ್‌ ಸೇರಿದಂತೆ ವಿಪಕ್ಷ ಸದಸ್ಯರು ಸಂಸತ್ತಿನಲ್ಲೇ ರಾತ್ರಿ ಕಳೆದರು. ಸಂವಿಧಾನ ಸದನ ಗೇಟ್‌ ಬಳಿಯೂ ಪ್ರತಿಭಟನೆ ನಡೆಸಿದರು. ಇದು ಬೆಳಗ್ಗಿನಜಾವದ ವರೆಗೂ ಮುಂದುವರಿಯಿತು.

ಗುರುವಾರ ಭಾರಿ ಗದ್ದಲದ ನಡುವೆ ಲೋಕಸಭೆಯಲ್ಲಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ ಮಸೂದೆ, 2025 ಅನ್ನು ಅಂಗೀಕರಿಸಲಾಗಿತ್ತು. ವಿಪಕ್ಷ ಸಂಸದರು, ಕೇಂದ್ರ ಸರ್ಕಾರ ರಾಷ್ಟ್ರಪಿತನನ್ನು ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದವು. ಈ ಆರೋಪಗಳ ನಡುವೆ ಸರ್ಕಾರ ಹೊಸ ಮಸೂದೆಯನ್ನು ಸಮರ್ಥಿಸಿಕೊಂಡಿತು.

ಸದನದಲ್ಲಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ 2009ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾಗೆ ಸೇರಿಸಲಾಗಿದೆ ಎಂದು ತಿರುಗೇಟು ನೀಡಿದರು. ಆರಂಭದಲ್ಲಿ ಅದು ನರೇಗಾ ಆಗಿತ್ತು, ಮಹಾತ್ಮ ಗಾಂಧಿಯವರ ಹೆಸರನ್ನ ಮಸೂದೆಯಲ್ಲಿ ಸೇರಿಸಿರಲಿಲ್ಲ. 2009ರ ಚುನಾವಣೆ ಹತ್ತಿರ ಬಂದಾಗ ಮತಗಳನ್ನ ಪಡೆಯಲು ಕಾಂಗ್ರೆಸ್‌ ಬಾಪೂ ಅವರನ್ನ ನೆನಪಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಎಂಜಿಎನ್‌ಇಜಿಎ ಅನ್ನು ಸರಿಯಾಗಿ ಮತ್ತು ಬಲವಾಗಿ ಜಾರಿಗೆ ತಂದರು ಎಂದು ಹೇಳಿದರು.

ಕಾಂಗ್ರೆಸ್ ಬಾಪೂ ಅವರ ಆದರ್ಶಗಳನ್ನು ಹತ್ಯೆ ಮಾಡಿತು. ಎನ್‌ಡಿಎ ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್, ಆಯುಷ್ಮಾನ್ ಭಾರತ್ ಅಡಿಯಲ್ಲಿ ಪಕ್ಕಾ ಮನೆಗಳನ್ನ ನಿರ್ಮಿಸಿ ಬಾಪೂ ಆದರ್ಶಗಳನ್ನ ಪುನರುಜ್ಜೀವನಗೊಳಿಸಿತು ಎಂದರು. ಕಾಂಗ್ರೆಸ್‌ ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧಿಯವರ ಹೆಸರಿನ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನ ಪಟ್ಟಿ ಮಾಡಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಟೀಕೆಗೆ ತಿರುಗೇಟು ನೀಡಿದರು.

ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಪ್ರತಿಪಕ್ಷದ ಶಾಸಕರು ಸದನದ ಬಾವಿಗಿಳಿದು, ಮಸೂದೆಯ ಪ್ರತಿಗಳನ್ನ ಹರಿದು ಸ್ಪೀಕರ್ ಕುರ್ಚಿಯ ಕಡೆಗೆ ಎಸೆದರು. ಮಸೂದೆ ಅಂಗೀಕಾರವಾದ ನಂತರ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನ ದಿನದ ಮಟ್ಟಿಗೆ ಮುಂದೂಡಿದರು.

ಇದಕ್ಕೂ ಮುನ್ನ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಶಾಸನ ಗಾಂಧಿಯವರಿಗೆ ಮಾಡಿದ ಅವಮಾನ ಮತ್ತು ಗ್ರಾಮೀಣ ಭಾರತದಲ್ಲಿ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಕಾರಣವಾದ ಕೆಲಸ ಮಾಡುವ ಹಕ್ಕಿಗೆ ಒಂದು ಹೊಡೆತ ಎಂದು ಕರೆದರು.

error: Content is protected !!
Scroll to Top